ಟಿವಿ ಮಾಧ್ಯಮಗಳ ಶಾಸ್ತ್ರ ಅಪಾಯಕಾರಿ: ಪಂಡಿತಾರಾಧ್ಯ ಸ್ವಾಮಿ
ಕಡೂರು: ಬಸವ ಜಯಂತಿ ಕಾರ್ಯಕ್ರಮ
ಕಡೂರು, ಮೇ 10: ಸಮಾಜದಲ್ಲಿ ಶಸ್ತ್ರ ಮತ್ತು ಶಾಸ್ತ್ರಗಳು ಅಪಾಯಕಾರಿ. ಇವುಗಳ ವಿರುದ್ಧ ಬಸವಣ್ಣ 12ನೆ ಶತಮಾನದಲ್ಲಿಯೇ ಹೋರಾಟ ನಡೆಸಿದ ಮಹಾಪುರುಷ. ಈಗಲೂ ಟಿ.ವಿ. ಮಾಧ್ಯಮಗಳಲ್ಲಿ ಶಾಸ್ತ್ರ ಹೇಳುವವರು ಸಮಾಜದ ಅಪಾಯಕಾರಿಗಳು. ಅವರ ಭವಿಷ್ಯವನ್ನು ಜನ ನಂಬಬಾರದು ಎಂದು ಹೊಸದುರ್ಗ ಸಾಣೇಹಳ್ಳಿ ಪೀಠಾಧ್ಯಕ್ಷ ಶ್ರೀಪಂಡಿತಾರಾಧ್ಯ ಶಿವಾಚಾರ್ಯಸ್ವಾಮಿಗಳು ಅಭಿಪ್ರಾಯಿಸಿದ್ದಾರೆ.
ಅವರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದ ಪ್ರಯುಕ್ತ ವಿನೂತನ ಕಾರ್ಯಕ್ರಮ ಅನುಭವ ಮಂಟಪದ ಪರಿಕಲ್ಪನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ನಾಡಿನಲ್ಲಿ ಕಾರ್ಯಕ್ರಮಗಳಿಗೆ ಬರವಿಲ್ಲ. ಅನೇಕ ಜಯಂತಿ ಕಾರ್ಯಕ್ರಮಗಳು ತುಂಬಾ ವಿಜೃಂಭಣೆಯಿಂದ ನಡೆಯುತ್ತವೆ. ಆದರೆ, ಜನಪರವಾದ ಕಾರ್ಯಕ್ರಮಗಳಿಗೆ ಕೊರತೆ ಇದೆ. ಮೇ 1ನೆ ದಿನದ ಕಾರ್ಮಿಕರ ದಿನಾಚರಣೆಯನ್ನು ವಿಶ್ವಕಾಯಕದ ದಿನಾಚರಣೆ ಎಂದು ಸರಕಾರ ಮಾಡಬೇಕಿದೆ ಎಂದರು.
ಜನರನ್ನು ವಿವೇಕಶೀಲರನ್ನಾಗಿ ಮಾಡಿರುವುದು ಶರಣರು. 12ನೆ ಶತಮಾನದಲ್ಲೇ ವೌಢ್ಯಗಳನ್ನು ಬಸವಣ್ಣನವರು ವಿರೋಧಿಸಿದ್ದರೂ 21ನೆ ಶತಮಾನದಲ್ಲೂ ವೌಢ್ಯಗಳು ಮುಂದುವರಿದಿ ರುವುದು ಅಪಾಯಕಾರಿ ಬೆಳವಣಿಗೆ ಎಂದು ಅಭಿಪ್ರಾಯಿಸಿದ ಶ್ರೀಗಳು, ಭಾರತ ವೌಢ್ಯ ಮುಕ್ತ, ಮದ್ಯಮುಕ್ತ ಸಮಾಜವಾಗಬೇಕಿದ್ದು, ಗ್ರಾಮ ಗಳು ಬಯಲು ಶೌಚಾ ಲಯ ಮುಕ್ತವಾಗಬೇಕು ಎಂದರು. ಸಮಾ ರಂಭದಲ್ಲಿ ಹೊಸದುರ್ಗ ಬ್ರಹ್ಮವಿದ್ಯಾನಗರ ಮುದ್ರೆ ಮಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮಿಗಳು ಮಾತನಾಡಿ, ಕ್ರಾಂತಿಕಾರಕ ವಿಷಯಗಳೊಂದಿಗೆ 12ನೆ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸೃಷ್ಟಿಸಿದರು. ವಚನಗಳ ಮೂಲಕ ಸಮಾಜದಲ್ಲಿ ನಡೆದ ಶೋಷಣೆಗಳನ್ನು ಸಾಮಾನ್ಯ ಜನರಿಗೆ ತಿಳಿಸುತ್ತಿದ್ದರು. ಮೇಲುಕೀಳು ಎಂಬ ಭೇದಭಾ ವನ್ನು ತೊಡೆದು ಹಾಕಲು ಬಸವಣ್ಣನವರು ಎಲ್ಲರನ್ನೂ ಒಂದೇ ವೇದಿಕೆಯಡಿ ತಂದರು ಇದು ಬಸವಣ್ಣನವರಿಗೆ ಸಮಾಜದ ಮೇಲಿದ್ದ ಕಳಕಳಿಯನ್ನು ತೋರುತ್ತಿದೆ ಎಂದರು. ಕಾಯಕದ ಪರಿಕಲ್ಪನೆಯ ಮೇರೆಗೆ ಶಾಸಕರ ನೇತೃತ್ವದಲ್ಲಿ 1 ಕಿ.ಮೀ. ರಸ್ತೆ ನಿರ್ಮಾಣವಾಗಿದೆ. ಇದು ಎಲ್ಲಾ ರಾಜಕಾರಣಿಗಳಿಗೂ ಮಾದರಿಯಾಗಬೇಕಿದೆ. ಎಲ್ಲವನ್ನು ಸರಕಾರ ಮಾಡಲು ಸಾಧ್ಯವಿಲ್ಲ. ಗ್ರಾಮಸ್ಥರು ಕಾಯಕದ ಮೂಲಕ ಇಂತಹ ಕಾರ್ಯ ಮಾಡಬೇಕಿದೆ. ಎಲ್ಲರಿಗೂ ಸಮಾನತೆಗೊಂಡಾಗ ಕಲ್ಯಾಣ ಗ್ರಾಮವಾಗಲಿದೆ. ಸಮಾಜದಲ್ಲಿ ಪರಿವರ್ತನೆಯನ್ನು ಕಾಣಬೇಕಿದೆ. ಎಲ್ಲರಲ್ಲೂ ಪರಿಸರದ ರಕ್ಷಣೆಯ ಮನೋಭಾವ ಬರಬೇಕಿದೆ ಎಂದು ತಿಳಿಸಿದರು. ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ಅನುಭವ ಮಂಟಪ ಪಕ್ಷ ರಾಜಕಾರಣದಿಂದ ಹೊರಗಿಟ್ಟು ನಡೆಸಲಾಗುವುದು. ಈ ಅನುಭವ ಮಂಟಪದ ಮೂಲಕ ಪ್ರತಿ ತಿಂಗಳ ಕೊನೆಯ ಸೋಮವಾರ ಕಾಯಕದ ದಿನವನ್ನಾಗಿ ಮಾಡಿ ಗ್ರಾಮಗಳ ಶುಚಿತ್ವಗೊಳಿಸುವುದು. ಸಸಿಗಳನ್ನು ನೆಡಿಸುವುದು, ಗ್ರಾಮಗಳ ರಸ್ತೆ ನಿರ್ಮಿಸುವುದು, ಶೌಚಾಲಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು. ಪ್ರತಿ ತಿಂಗಳು ಒಂದು ಗ್ರಾಮವನ್ನು ಆಯ್ಕೆ ಮಾಡಿ ಕಾಯಕ ಮಾ ಡಲಾಗುವುದು, ಪಾನಮುಕ್ತಕ್ಕೆ ಆದ್ಯತೆ ನೀಡಲಾಗುವುದು, ಪ್ರತಿ ಜನಾಂಗದವರು ಅನುಭವ ಮಂಟಪದ ಸದಸ್ಯರಾಗುವ ಮೂಲಕ ಹೊಸ ರೂಪವನ್ನು ಈ ಕ್ಷೇತ್ರದಲ್ಲಿ ತರಲು ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು. ಈ ಸಂದರ್ಭ ಅನುಭವ ಮಂಟಪದಲ್ಲಿ ಎಲ್ಲಾ ಸಮಾಜದವರು ಉಪಸ್ಥಿತರಿದ್ದರು. 12ನೆ ಶತಮಾನದ ಅನುಭವ ಮಂಟಪದ ಅನುಭವ ಮೂಡುವಂತಿತ್ತು. ಇಡೀ ರಾಜ್ಯದಲ್ಲಿ ಎಲ್ಲೂ ನಡೆಯದ ಅಪರೂಪದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದ ನಂತರ ಸಾಮೂಹಿಕ ದಾಸೋಹ ನಡೆಯಿತು.







