ಶಿವಮೊಗ್ಗ: ಪ್ರಮಾಣ ಪತ್ರ ವಿತರಣೆಯಲ್ಲಿ ವಿಳಂಬ ಆರೋಪ
ನಾಡಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ
ಶಿವಮೊಗ್ಗ, ಮೇ 10: ವಿವಿಧ ಪ್ರಮಾಣಪತ್ರಗಳ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ನಗರದ ಹೊರವಲಯದ ವಿದ್ಯಾನಗರ ಬಡಾವಣೆಯಲ್ಲಿರುವ ನಾಡ ಕಚೇರಿಯ ಮುಂಭಾಗ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಸೌಲಭ್ಯ ಪಡೆಯಲು ಪ್ರಮಾಣ ಪತ್ರ ಹಾಗೂ ನಾನಾ ರೀತಿಯ ದಾಖಲೆ ಪಡೆಯಲು ನಾಡ ಕಚೇರಿಗೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಆಗಮಿಸುತ್ತಾರೆ. ಆದರೆ ನಿಗದಿತ ಸಮಯಕ್ಕೆ ಪ್ರವ ಾಣಪತ್ರ-ದಾಖಲೆಗಳು ದೊರಕುತ್ತಿಲ್ಲ. ಇದರಿಂದ ಗ್ರಾಮಸ್ಥರ ಅಮೂಲ್ಯವಾದ ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ. ತಮ್ಮೆಲ್ಲ ಕೆಲಸ ಕಾರ್ಯ ಬಿಟ್ಟು ನಾಡ ಕಚೇರಿಗೆ ಅಲೆದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಮಹಿಳೆಯರು, ವಯೋವೃದ್ಧರು, ಅಂಗವಿಕಲರು ಕಚೇರಿಯ ಆವರಣದಲ್ಲಿ ಬಿಸಿಲಿನಲ್ಲಿಯೇ ಸರದಿ ಸಾಲಿನಲ್ಲಿ ನಿಲ್ಲುವಂತಹ ದುಃಸ್ಥಿತಿಯಿದೆ. ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಠ ವ್ಯವಸ್ಥೆಯೂ ಇಲ್ಲವಾಗಿದೆ. ಈ ನಡುವೆ ಕಳೆದ 5 ದಿನಗಳಿಂದ ಕಚೇರಿಯಲ್ಲಿ ಯಾವ ಕೆಲಸವೂ ನಡೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಇಲ್ಲ, ಕಂಪ್ಯೂಟರ್ ಕೆಟ್ಟಿದೆ, ಸರ್ವರ್ ಕೈಕೊಟ್ಟಿದೆ, ಪ್ರಿಂಟರ್ ಇಲ್ಲ, ಸಿಬ್ಬಂದಿಯಿಲ್ಲ ಎಂಬಿತ್ಯಾದಿ ಕುಂಟುನೆಪ ಹೇಳುತ್ತಾ ಸಿಬ್ಬಂದಿ ನಾಗರಿಕರನ್ನು ಸತಾಯಿಸುತ್ತಿದ್ದಾರೆ. ಕಚೇರಿಗೆ ಅಲೆದು ಅಲೆದು ಗ್ರಾಮಸ್ಥರು ಸುಸ್ತಾಗಿ ಹೋಗಿದ್ದಾರೆ. ಇಲ್ಲಿ ಹೇಳುವವರು, ಕೇಳುವವರ್ಯಾರು ಇಲ್ಲದಂತಾಗಿದ್ದು, ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತ
ಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತತ್‌ಕ್ಷಣವೇ ತಾಲೂಕು ಆಡಳಿತವು ವಿದ್ಯಾನಗರ ನಾಡ ಕಚೇರಿಯಲ್ಲಿರುವ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಕಾಲಮಿತಿಯಲ್ಲಿ ಪ್ರಮಾಣ ಪತ್ರ ನೀಡುವುದರ ಜೊತೆಗೆ ಕಚೇರಿ ಆವರಣದಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸಲು ನಿಟ್ಟಿನಲ್ಲಿ ಶೀಘ್ರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.







