ನ್ಯಾಯವಾದಿ ನೇಮಿಸಲು ಅಡಿಕೆ ಬೆಳೆಗಾರರ ಸಂಘದ ಆಗ್ರಹ
.jpg)
ಸಾಗರ, ಮೇ 10: ಸುಪ್ರೀಂ ಕೋರ್ಟ್‌ನಲ್ಲಿ ಅಡಿಕೆ ಹಾನಿಕಾರಕ ಎಂದು ಸಲ್ಲಿಸಿರುವ ಅಫಿಡಾವಿತ್ ಮೇಲೆ ವಾದ ಮಂಡಿಸಲು ಹಿರಿಯ ನ್ಯಾಯವಾದಿಯೊಬ್ಬರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಮಂಗಳವಾರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಕ್ಯಾಂಮ್ಕಾಮ್ಯಾಮ್ಕೋಸ್, ಆಪ್ಸ್‌ಕೋಸ್ ಮತ್ತು ತೋಟಗಾರ್ಸ್ ಸಂಸ್ಥೆಗಳ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಯಿತು. ಸುಪ್ರೀಂ ಕೋರ್ಟ್‌ನಲ್ಲಿ ಅಡಿಕೆಯನ್ನು ನಿಷೇಧಿಸುವ ಪ್ರಸ್ತಾವದ ಪ್ರಕರಣ ನಡೆಯುತ್ತಿದೆ. ಅಡಿಕೆಯನ್ನು ನಿಷೇದಿಸುವ ಪರವಾದ ಈ ಪ್ರಕರಣ ಬೆಳೆಗಾರರಿಗೆ ವಿರುದ್ಧವಾಗಿ ಬರುವ ಸಾಧ್ಯತೆ ಇದೆ ಎನ್ನುವ ಭೀತಿ ಬೆಳೆಗಾರ ವಲಯದಲ್ಲಿದೆ. ಈ ಸಂದರ್ಭದಲ್ಲಿ ಅಡಿಕೆಯಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂದು ಸಾಬೀತು ಪಡಿಸುವ ಬೆಳೆಗಾರರ ಪರ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವ ಹಿರಿಯ ವಕೀಲರೋರ್ವರ ನೇಮಕ ಮಾಡುವ ಅಗತ್ಯವಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಹಿರಿಯ ಪ್ರಭಾವಶಾಲಿ ವಕೀಲರೋರ್ವರನ್ನು ಅಡಿಕೆಬೆಳೆಗಾರರಪರ ವಾದಿಸಲು ನೇಮಿಸಬೇಕು. ಕ್ಯಾಂಮ್ಕಾ ಸೇರಿದಂತೆ ಇತರ ಎಲ್ಲ ಅಡಿಕೆ ಸಹಕಾರಿ ಸಂಘಗಳು ವಂತಿಗೆ ಹಾಕಿ ಕೂಡಲೇ ವಕೀಲರನ್ನು ನೇಮಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿಂದೆ ಕಾಗೋಡು ತಿಮ್ಮಪ್ಪಅವರು ಆರೋಗ್ಯ ಸಚಿವರಾಗಿದ್ದಾಗ ಮೈಸೂರಿನ ಕೇಂದ್ರ ಆಹಾರ ಸಂಶೋಧನಾ ಸಂಸ್ಥೆಗೆ ಅಡಿಕೆಯನ್ನು ಪರೀಕ್ಷೆಗೆ ಕಳಿಸಿದ್ದರು. ಈ ಸಂದರ್ಭದಲ್ಲಿ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗುವ ಯಾವುದೇ ಅಂಶಗಳಿಲ್ಲ ಎನ್ನುವುದು ರುಜುವಾತಾಗಿದೆ. ಈ ಸಂಶೋಧನಾ ವರದಿಯನ್ನು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಅಡಿಕೆಯಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಇದನ್ನು ನಂಬಿಕೊಂಡು ಅಡಿಕೆ ಬೆಳೆಗಾರರು, ಕೃಷಿ ಕೂಲಿ ಕಾರ್ಮಿಕರು, ಅಡಿಕೆ ಸಂಸ್ಕರಣೆ ಮಾಡುವವರು, ಅಡಿಕೆ ಸಾಗಣಿಕೆದಾರರು, ಚೀಲ ತಯಾರಕರು, ಪಾನ್‌ವಾಲಾಗಳು ಬದುಕುತ್ತಿದ್ದಾರೆ. ಈ ಎಲ್ಲವನ್ನು ಸುಪ್ರೀಂ ಕೋರ್ಟ್ ಗಮನಿಸುವಂತೆ ಬೆಳೆಗಾರರ ಪರವಾಗಿ ಪರಿಣಾಮಕಾರಿ ವಾದ ಮಂಡಿಸುವಂತೆ ಅಡಿಕೆ ಸಹಕಾರಿ ಸಂಘಗಳು ಗಮನ ಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಂತ್, ಪ್ರಧಾನ ಕಾರ್ಯದರ್ಶಿ ವ.ಶಂ.ರಾಮಚಂದ್ರ ಭಟ್, ಉಪಾಧ್ಯಕ್ಷರಾದ ಕಟ್ಟಿನಕೆರೆ ಸೀತಾರಾಮಯ್ಯ, ಜಗದೀಶ್ ಗೌಡ, ಪ್ರಮುಖರಾದ ಪಿ.ಎನ್.ಸುಬ್ರಾವ್, ಮಹಾಬಲಗಿರಿ ಮುಂಗಳಿಮನೆ, ವೆಂಕಟಗಿರಿ, ಕೆ.ಎಸ್.ಸುಬ್ರಾವ್, ಶ್ರೀಧರ ಕೊಡಕೋಳ, ತಿರುಮಲ ಮಾವಿನಕುಳಿ ಇನ್ನಿತರರು







