ಧಾರವಾಡ: ರಾಜ್ಯ ಮಟ್ಟದ ಖಾಸಗಿ ಶಿಕ್ಷಕರ ಉದ್ಯೋಗ ಮೇಳ
ಕಾರವಾರ, ಮೇ 10: ಧಾರವಾಡದ ಎಮ್.ಎಸ್.ಎಸ್.ಎ.ಎಸ್. ಹಾಗೂ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ಹಾಗೂ ಉದ್ಯೋಗ ಸಮಯ ಪತ್ರಿಕೆ ವತಿಯಿಂದ ಧಾರವಾಡದಲ್ಲಿ ಮೇ 15ರಂದು ರಾಜ್ಯ ಮಟ್ಟದ ಬೃಹತ್ ಖಾಸಗಿ ಶಿಕ್ಷಕರ ಹುದ್ದೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ನಾಗರಾಜ್ ಎಚ್.ಎನ್ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಿಕ್ಷಕರ ಉದ್ಯೋಗ ಮೇಳವು ಧಾರವಾಡ ಜಿಲ್ಲೆಯ ಉದ್ಯೋಗ ಸಮಯ ಪತ್ರಿಕೆ, ವಿದ್ಯಾ ಭವನ, ಹಳೆಯ ಡಿವೈಎಸ್ಪಿ ಕಚೇರಿ, ಭಾವಸಾರ ಮಂಗಲ ಕಾರ್ಯಾಲಯ ಹತ್ತಿರ, ಪಿ.ಬಿ.ರೋಡ್‌ನಲ್ಲಿ ಆಯೋಜಿಸಲಾಗಿದೆ ಎಂದರು. ಶಿಕ್ಷಕರು ಉದ್ಯೋಗಕ್ಕಾಗಿ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಪ್ರತಿವರ್ಷ ಶೈಕ್ಷಣಿಕ ವರ್ಷದ ಆರಂಭದ ಜೂನ್ ತಿಂಗಳಲ್ಲಿ ಶಿಕ್ಷಕರ ನೇಮಕಾತಿ ಹೊಂದಬಹುದೆಂಬ ಭರವಸೆಯಲ್ಲಿ ಶಿಕ್ಷಕರ ಅರ್ಹತೆ ಹೊಂದಿದ ಅಭ್ಯರ್ಥಿಗಳಿದ್ದಾರೆ. ಅರ್ಹತೆ ಹೊಂದಿದ ಶಿಕ್ಷಕರಿಗೆ ಒಂದೇ ಸೂರಿನಡಿ ನೇಮಕಾತಿ ಮಾಡಿಕೊಳ್ಳುವ ಮಹತ್ವವಾದ ಶಿಕ್ಷಕರ ನೇಮಕಾತಿ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಕ ಅರ್ಹತೆ ಹೊಂದಿದ ಅಭ್ಯರ್ಥಿಗಳು ಶಿಕ್ಷಕರ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಸುಮಾರು 5,000ಕ್ಕೂ ಹೆಚ್ಚು ಶಿಕ್ಷಕರು ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಸಂದರ್ಶನದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ಕೇಳುವ ಎಲ್ಲ ಮಾಹಿತಿ ನೀಡಿ ಶಿಕ್ಷಕರ ಹುದ್ದೆ ಆಯ್ಕೆ ಹೊಂದಬಹುದು. ಆಯಾ ಶಿಕ್ಷಣ ಸಂಸ್ಥೆ ನಿಗದಿಪಡಿಸುವ ನೀತಿನಿಯಮಗಳು, ವೇತನ, ಸಂದರ್ಶನದಲ್ಲಿ ನಿರ್ಣಯಿಸಬಹುದು. ಅದಕ್ಕಾಗಿ ಅಭ್ಯರ್ಥಿಗಳು ಮುಂಚಿತವಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೋಂದಣಿಯನ್ನು ಮೊಬೈಲ್ 9886569432 ಸಂಖ್ಯೆಗೆ ಎಸ್.ಎಮ್.ಎಸ್. ಕಳುಹಿಸುವ ಮೂಲಕ ಮಾಡಬಹುದು.
ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರು ವಿಶೇಷವಾಗಿ ಭಾಗವಹಿಸಬಹುದು. ಜೊತೆಗೆ ಶಾಲೆಗಳಲ್ಲಿರುವ ಸಹಾಯಕ ಹುದ್ದೆಗಳು ಆಯಾ, ಕ್ಲರ್ಕ, ಅಕೌಟೆಂಟ್, ಸಿಪಾಯಿ, ಮ್ಯಾನೇಜರ್, ಆಡಳಿತಾಧಿಕಾರಿ, ಮುಖ್ಯ ಶಿಕ್ಷಕರು ಇತ್ಯಾದಿ ಹುದ್ದೆಗಳಿಗೂ ಸಹ ಭಾಗವಹಿಸಬಹುದು. ಆಯಾ ಶಿಕ್ಷಣ ಸಂಸ್ಥೆಯಿಂದ ನಡೆಯುವ ಶಾಲೆ, ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆಗಳ ವಿವರವನ್ನು ಮೇಲ್ಕಂಡ ವಿಳಾಸಕ್ಕೆ ಸಂಪರ್ಕಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9480062375 / 9945169432 ಸಂಪರ್ಕಿಸಬೇಕು ಎಂದರು. ಪತ್ರಿಕಾಗೋಷ್ಠಿ ಧಾರವಾಡದ ಜಿ. ಆರ್. ಮಾಂಡ್ರೆ ಭಾಗವಹಿಸಿದ್ದರು.







