‘ಇದು ನನ್ನ ಬಸ್ಸು’ ಅಭಿಯಾನ
ಇತಿಹಾಸ ನಿರ್ಮಿಸಿದ ಸಾರಿಗೆ ಸಂಸ್ಥೆ

ಬೆಂಗಳೂರು, ಮೇ 10: ಕೇಂದ್ರ ಸರಕಾರದ ನೂತನ ಪಿಎಫ್ ನೀತಿ ಖಂಡಿಸಿ ಪ್ರತಿಭಟನೆ ನಡೆದ ಸಂದರ್ಭಗಳಲ್ಲಿ ಕಿಡಿಗೇಡಿಗಳು ಬಸ್‌ಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡಿರುವ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಸಾರಿಗೆ ಇಲಾಖೆಯು ‘ಇದು ನನ್ನ ಬಸ್ಸು’ ಕಾರ್ಯಕ್ರಮವನ್ನು ಹಮ್ಮಿಕೊಂಡು ದೇಶದ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಥಮ ಪ್ರಯೋಗ ಮಾಡಿದೆ.
‘‘ಇದು ನನ್ನ ಬಸ್ಸು’’ ಕಾರ್ಯಕ್ರಮದ ಅಂಗವಾಗಿ ಸರಕಾರಿ ಬಸ್‌ಗಳು ಸಾರ್ವಜನಿಕರ ಆಸ್ತಿ ಎಂಬುದನ್ನು ಮನವರಿಕೆ ಮಾಡಲು ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹಾನಿಯಾಗಿರುವ ಬಸ್ಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಇತ್ತೀಚೆಗೆ ಗಾರ್ಮೆಂಟ್ಸ್ ನೌಕರರು ಕೇಂದ್ರ ಸರಕಾರದ ಪಿಎಫ್ ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಸಾರಿಗೆ ಬಸ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟು ಕರಕಲು ಮಾಡಿದ್ದ ಬಸ್‌ಗಳು ಸಾರ್ವಜನಿಕರ ಗಮನ ಸೆಳೆಯಿತು.
ಸುಟ್ಟು ಹೋಗಿರುವ ಬಸ್‌ಗಳನ್ನು ತಂದು ಬಸ್‌ಗಳೇ ತಮ್ಮ ನೋವು ಹೇಳಿಕೊಳ್ಳುತ್ತಿರುವಂತೆ ಪ್ರದರ್ಶಿಸಲಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಎಂಬ ಬಸ್ ಮೇಲಿನ ನಾಮಫಲಕಗಳ ಮುಖಾಂತರ ಸಾರ್ವಜನಿಕರಿಗೆ ತಮ್ಮ ತಪ್ಪಿನ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುತ್ತಿದೆ.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪ್ರಸ್ತುತ ಕರ್ನಾಟಕ ಸಾರಿಗೆಯ ನಾಲ್ಕು ನಿಗಮಗಳಲ್ಲಿ 23,000ಕ್ಕೂ ಅಧಿಕ ಬಸ್ಸುಗಳಿದ್ದು, ಈ ನಾಲ್ಕು ನಿಗಮಗಳ ಬಸ್ಸುಗಳಲ್ಲಿ ಪ್ರತಿದಿನಕ್ಕೆ 1.25 ಕೋಟಿ ರೂ. ಗೂ ಅಧಿಕ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ. ಆದರೆ, ಸದಾ ಸೇವೆಯಲ್ಲಿರುವ ಸಾರಿಗೆ ಬಸ್ಸುಗಳ ಮೇಲೆ ಕಲ್ಲು ತೂರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ವಿ.ವೆಂಕಟೇಶ್, ಪಾಲಿಕೆ ಸದಸ್ಯ ಡಾ.ಲೋಹಿತ್ ಡಿ.ನಾಯ್ಕರ್, ಪರಿಸರ ತಜ್ಞ ಯಲ್ಲಪ್ಪರೆಡ್ಡಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ ಕಟಾರಿಯಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.





