ಮೋದಿ ಪದವಿಯಲ್ಲಿ ತಪ್ಪು: ಒಪ್ಪಿಕೊಂಡ ದಿಲ್ಲಿ ವಿ.ವಿ. ಆದರೆ ಪದವಿ ನಕಲಿಯಲ್ಲ - ಕುಲ ಸಚಿವ

ಹೊಸದಿಲ್ಲಿ,ಮೇ 10: ಬಿಜೆಪಿಯು ಬಹಿರಂಗಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಬಿ.ಎ.ಪದವಿಯಲ್ಲಿರುವ ತಪ್ಪನ್ನು ದಿಲ್ಲಿ ವಿಶ್ವವಿದ್ಯಾಲಯವು ಮಂಗಳವಾರ ಒಪ್ಪಿಕೊಂಡಿದ್ದು, ಇಂದೊಂದು ಸಣ್ಣ ತಪ್ಪು ಎಂದು ಹೇಳಿದೆ.
ಮೋದಿಯವರು 1978ರಲ್ಲಿ ವಿವಿಯನ್ನು ತೊರೆದಿದ್ದು, ಪ್ರಮಾಣಪತ್ರದಲ್ಲಿ ಅವರು ಪದವಿ ಪಡೆದಿರುವ ವರ್ಷವನ್ನು 1979 ಎಂದು ಉಲ್ಲೇಖಿಸಲಾಗಿರುವುದು ಸಣ್ಣ ಪ್ರಮಾದ ಎಂದಿರುವ ವಿವಿ, ಆದರೆ ಅವರ ಪದವಿ ಅಧಿಕೃತವಾದುದು. ಅವರು ಪದವಿಯನ್ನು ಪಡೆದಿರುವ ಬಗ್ಗೆ ಎಲ್ಲ ಸುಸಂಗತ ದಾಖಲೆಗಳು ತನ್ನ ಬಳಿಯಿವೆ ಎಂದು ಒತ್ತಿ ಹೇಳಿದೆ.
ನಾವು ನಮ್ಮ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಪದವಿ ಅಧಿಕೃತವಾದುದು ಎನ್ನುವುದನ್ನು ನಾವು ದೃಢಪಡಿಸಿಕೊಂಡಿದ್ದೇವೆ. 1978ರಲ್ಲಿ ಅವರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, 1979ರಲ್ಲಿ ಅವರಿಗೆ ಪದವಿಯನ್ನು ಪ್ರದಾನ ಮಾಡಲಾಗಿತ್ತು ಎಂದು ವಿವಿಯ ಕುಲಸಚಿವ ತರುಣ ದಾಸ್ ತಿಳಿಸಿದರು. ಅವರ ಈ ಹೇಳಿಕೆಯ ಕೆಲವೇ ಗಂಟೆಗಳ ಮುನ್ನ ಮೋದಿಯವರ ಪದವಿಯ ವಿವರಗಳನ್ನು ಕೋರಿ ವಿವಿಗೆ ತೆರಳಿದ್ದ ಆಪ್ ನಿಯೋಗ ಬರಿಗೈಯಲ್ಲಿ ವಾಪಸಾಗಿತ್ತು.
ಮೋದಿಯವರು ತನ್ನ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಸುಳ್ಳು ಹೇಳಿಕೊಂಡಿದ್ದಾರೆ ಎಂಬ ಪ್ರತಿಪಕ್ಷ ಆರೋಪಗಳಿಗೆ ಉತ್ತರವಾಗಿ ಬಿಜೆಪಿಯು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಧಾನಿಯವರ ವಿವಿ ಪದವಿ ಪ್ರಮಾಣಪತ್ರಗಳನ್ನು ಬಹಿರಂಗಗೊಳಿಸಿತ್ತು. ಇದರ ಬೆನ್ನಿಗೇ ಆಪ್ ಮೋದಿಯವರ ಪ್ರಮಾಣಪತ್ರಗಳು ನಕಲಿಯಾಗಿವೆ ಮತ್ತು ಕಣ್ಣಿಗೆ ಎದ್ದು ಕಾಣುವಂತಹ ಅಸಂಗತತೆಗಳಿವೆ. ಮೋದಿಯವರ ಬಿಎ ಮತ್ತು ಎಂಎ ಪ್ರಮಾಣಪತಗಳಲ್ಲಿ ಮೋದಿಯವರ ಹೆಸರುಗಳಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿತ್ತು.
ಮೋದಿಯವರ ಹೆಸರುಗಳಲ್ಲಿ ವ್ಯತ್ಯಾಸವು ವಿವಿಯ ದಾಖಲೆಗಳಲ್ಲೂ ಇದೆ ಎಂದು ಹೇಳಿದ ದಾಸ್,ವಿವಿಯು ತನ್ನ ವಿದ್ಯಾರ್ಥಿಗಳ ಖಾಸಗಿತನವನ್ನು ಕಾಯ್ದುಕೊಳ್ಳಲು ಬಯಸುತ್ತದೆ.ಆದರೆ ಮೋದಿಯವರ ಪದವಿ ಕುರಿತು ಪ್ರಶ್ನೆಗಳು ಮತ್ತು ಮಾಧ್ಯಮಗಳಲ್ಲಿ ವಿಚಾರಣೆಗಳ ಹಿನ್ನೆಲೆಯಲ್ಲಿ ನರೇಂದ್ರ ದಾಮೋದರದಾಸ ಮೋದಿಯವರು ಬಿಎ ಪದವಿಗೆ ಅರ್ಹರಾಗಿದ್ದರು. ಅವರ ನೋಂದಣಿ ಸಂಖ್ಯೆಸಿಸಿ 594/74 ಮತ್ತು ಪರೀಕ್ಷೆಯ ರೋಲ್‌ನಂಬರ್ 16594 ಆಗಿತ್ತು ಎಂದು ತಿಳಿಸಲು ವಿವಿಯು ಬಯಸುತ್ತಿದೆ ಎಂದು ತಿಳಿಸಿದರು.





