ಒಂದು ಟಿಎಂಸಿ ನೀರು ಬಿಡುಗಡೆಗೆ ಸಮ್ಮತಿ
ತೆಲಂಗಾಣ ಕಾಂಗ್ರೆಸ್ ನಿಯೋಗದಿಂದ ಮುಖ್ಯಮಂತ್ರಿ ಭೇಟಿ

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್ಕುಮಾರ್ ರೆಡ್ಡಿ, ವಿಧಾನಮಂಡಲದ ಪ್ರತಿಪಕ್ಷಗಳ ನಾಯಕರಾದ ಜನಾರೆಡ್ಡಿ ಹಾಗೂ ಶಬ್ಬೀರ್ ಅಲಿ ನೇತೃತ್ವದ ನಿಯೋಗವು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯರನ್ನು ಮಂಗಳವಾರ ಸಂಜೆ ಭೇಟಿ ಮಾಡಿ ಚರ್ಚೆ ನಡೆಸಿತು.
ಬೆಂಗಳೂರು, ಮೇ 10: ತೆಲಂಗಾಣ ರಾಜ್ಯದ ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ನಾರಾಯಣಪುರ ಜಲಾಶಯದಿಂದ ಜುರಾಲ ಜಲಾಶಯಕ್ಕೆ 3 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದೆ.
ಮಂಗಳವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್ಕುಮಾರ್ ರೆಡ್ಡಿ, ವಿಧಾನಮಂಡಲದ ಪ್ರತಿಪಕ್ಷಗಳ ನಾಯಕರಾದ ಜನಾರೆಡ್ಡಿ ಹಾಗೂ ಶಬ್ಬೀರ್ ಅಲಿ ನೇತೃತ್ವದ ನಿಯೋಗವು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ತೀವ್ರ ಬರಗಾಲದ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದ ಮೆಹಬೂಬ್ನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರವೆದ್ದಿದೆ. ಮಾನವೀಯ ದೃಷ್ಟಿಯಿಂದ ನಾರಾಯಣಪುರ ಜಲಾಶಯದಿಂದ ಜುರಾಲ ಜಲಾಶಯಕ್ಕೆ 3 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ನಿಯೋಗವು ಮುಖ್ಯಮಂತ್ರಿಗೆ ಮನವಿ ಮಾಡಿತು. ಅಲ್ಲದೆ, ಇದೇ ಸಂದರ್ಭದಲ್ಲಿ ರಾಜೋಳಿ ಬಂಡ ತಿರುವ ಯೋಜನೆ ಕುರಿತು ಚರ್ಚೆ ನಡೆಸಿತು.
ಒಂದು ಟಿಎಂಸಿ ನೀರು ಬಿಡುಗಡೆಗೆ ಸಮ್ಮತಿ: ರಾಜ್ಯದಲ್ಲಿಯೂ ತೀವ್ರ ಬರಗಾಲವಿದ್ದು ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಆದರೂ, ಮಾನವೀ ಯ ನೆಲೆಯಲ್ಲಿ ಒಂದು ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತೆಲಂಗಾಣ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಇದರಿಂದಾಗಿ, ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿಗೆ ಶಾಸಕರ ನಿಯೋಗ ಹಾಗೂ ರೈತರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕೃಷಿ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





