ಕೀಳು ಮಟ್ಟದ ಟೀಕೆ ಒಳ್ಳೆಯ ಲಕ್ಷಣವಲ್ಲ...

ಮಾನ್ಯರೆ,
ಇತ್ತೀಚೆಗೆ ಬರ ಅಧ್ಯಯನ ಪ್ರವಾಸದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಅತ್ಯಂತ ಕೀಳುಮಟ್ಟದಲ್ಲಿ ಅದರಲ್ಲೂ ಏಕವಚನದಲ್ಲಿ ಸಂಬೋಧಿಸಿ ಟೀಕೆ ಮಾಡಿರುವುದು ಒಳ್ಳೆಯ ಲಕ್ಷಣವಲ್ಲ.
ಸಿದ್ದರಾಮಯ್ಯನವರು ಎಲ್ಲಿಂದಲೋ ಬಂದು ಮುಖ್ಯಮಂತ್ರಿಯಾದವರಲ್ಲ. ನಾಲ್ಕು ದಶಕಗಳ ಹೋರಾಟದ ಹಿನ್ನೆಲೆ, ಹಲವಾರು ಬಾರಿ ಶಾಸಕರಾಗಿ, ಉಪ ಮುಖ್ಯಮಂತ್ರಿಯಾಗಿ ಸಂಘಟನೆ ಮತ್ತು ಸಂಘರ್ಷದ ಮೂಲಕ ಮುಖ್ಯಮಂತ್ರಿಯಾಗಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿಯಾಗಿ, ಮೂರು ವರ್ಷ ಪೂರೈಸಿರುವುದನ್ನು ಅನೇಕರಿಗೆ ಸಹಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ದುರುದ್ದೇಶದಿಂದ ಕೀಳುಮಟ್ಟದ ತಂತ್ರಗಾರಿಕೆಯ ರಾಜಕಾರಣವನ್ನು ಮಾಡಲಾಗುತ್ತಿದೆ.
ಈ ಹಿಂದೆ, ರಾಜ್ಯದಲ್ಲಿ ಪ್ರವಾಹ ಬಂದು ಸಾವಿರಾರು ಮನೆಗಳು ನೆಲಕ್ಕುರುಳಿದಾಗ ಅಂದಿನ ಕೇಂದ್ರದ ಯುಪಿಎ ಸರಕಾರ ಸಹಸ್ರಾರು ಕೋಟಿ ರೂಪಾಯಿಗಳ ನೆರವನ್ನು ಅಂದು ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರಕಾರಕ್ಕೆ ನೀಡಿತ್ತು. ನರ್ಮ್ ಯೋಜನೆಯಡಿಯಲ್ಲಿ 21,000 ಕೋಟಿ ರೂ. ನೀಡಿತ್ತು. ಅಲ್ಲದೆ ವಿವಿಧ ಸಂದರ್ಭಗಳಲ್ಲಿ ಪಕ್ಷಪಾತ ಮಾಡದೆ ರಾಜ್ಯದ ಜನರಿಗೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ನೆರವು ನೀಡಿದ್ದರು. ಆದರೆ ಈ ಸಂಗತಿಗಳನ್ನು ಸಿದ್ದರಾಮಯ್ಯರವರು ರಸ್ತೆ-ರಸ್ತೆಗಳಲ್ಲಿ ತಮಟೆ ಹೊಡೆದುಕೊಂಡು ಹೇಳಲಿಲ್ಲ. ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ಕೊಡುವ ಅನುದಾನ ಅದರ ಕರ್ತವ್ಯವೇ ಹೊರತು ಭಿಕ್ಷೆಯಲ್ಲ. ಕೇಂದ್ರ ಸರಕಾರದ ಖಜಾನೆ ತುಂಬುವುದೇ ರಾಜ್ಯ ಸರಕಾರಗಳು ನೀಡುವ ತೆರಿಗೆ ಹಣದಿಂದ.
ಹೀಗಿರುವಾಗ ಬರ ಪರಿಹಾರಕ್ಕಾಗಿ ಕೇಳಿದ್ದಕ್ಕಿಂತ ಕಡಿಮೆ ಮೊತ್ತವನ್ನು ಕೊಟ್ಟು ತಾವು ಏನೋ ದಯೆಯಿಂದ ಕೊಟ್ಟೆವು ಎನ್ನುವ ರೀತಿಯಲ್ಲಿ ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಲಿ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರದಲ್ಲಿ ರಾಜ್ಯಗಳ ಪಾಲು ಇದೆ ಎನ್ನುವುದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅರಿತು ವರ್ತಿಸಲಿ.
-ಕೆ. ಎಸ್. ನಾಗರಾಜ್, ಬೆಂಗಳೂರು





