ಐಟಿ ಉದ್ಯೋಗಿಯೂ ಕಾರ್ಮಿಕ: ನ್ಯಾಯಾಲಯ
ಚೆನ್ನೈ,ಮೇ 10: ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಯಲ್ಲಿ ದುಡಿಯುವ ವ್ಯಕ್ತಿಯನ್ನು ‘ಕಾರ್ಮಿಕ’ಎಂದು ಬಣ್ಣಿಸಬಹುದಾಗಿದೆ ಎಂದು ಮಂಗಳವಾರ ಎತ್ತಿ ಹಿಡಿದ ಇಲ್ಲಿಯ ಹೆಚ್ಚುವರಿ ಕಾರ್ಮಿಕ ನ್ಯಾಯಾಲಯವು,ಉದ್ಯೋಗಿಯೋರ್ವನನ್ನು ಅಕ್ರಮವಾಗಿ ಕೆಲಸದಿಂದ ವಜಾಗೊಳಿಸಿದ್ದ ಕಂಪೆನಿಯ ಕ್ರಮವನ್ನು ತಳ್ಳಿಹಾಕಿತು.
ವಜಾಗೊಂಡ ದಿನಾಂಕದಿಂದ ಪುನರ್‌ನೇಮಕದ ದಿನಾಂಕದವರೆಗಿನ ಸೇವಾ ಅವಧಿ ಯ ಜೊತೆಗೆ ಹಿಂದಿನ ಸಂಪೂರ್ಣ ವೇತನ ಮತ್ತು ಇತರ ಸೌಲಭ್ಯಗಳನ್ನು ಪಾವತಿಸುವಂತೆಯೂ ನ್ಯಾ.ಎಸ್. ನಂಬಿರಾಜನ್ ಅವರು ಕಂಪೆನಿಗೆ ಆದೇಶಿಸಿದರು.
ಎಚ್‌ಸಿಎಲ್ ಟೆಕ್ನಾಲಜಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದ ಕೆ.ರಮೇಶ ಅವರನ್ನು ಕಂಪೆನಿಯು 2013,ಸೆ.20ರಂದು ಕೆಲಸದಿಂದ ವಜಾಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಕಾರ್ಮಿಕ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ರಮೇಶ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದು,ಅವರು ‘ಕಾರ್ಮಿಕ’ ವ್ಯಾಖ್ಯೆಯಲ್ಲಿ ಬರುವುದಿಲ್ಲ ಎಂದು ಕಂಪೆನಿಯು ವಾದಿಸಿತ್ತು.
ಸಾಫ್ಟ್‌ವೇರ್ ಕಂಪೆನಿಯಲ್ಲಿ ಇಂಜಿನಿಯರ್ ಉದ್ಯೋಗವು ಕೌಶಲಗಳನ್ನು ಮತ್ತು ತಾಂತ್ರಿಕ ಜ್ಞಾನವನ್ನು ಒಳಗೊಂಡಿರುತ್ತದೆ ಎನ್ನುವುದನ್ನು ನಿರಾಕರಿಸಲಾಗದು. ಕೌಶಲವನ್ನು ಬೇಡುವ ಕೆಲಸವನ್ನು ಮಾಡುವ ಯಾವುದೇ ವ್ಯಕ್ತಿಯೂ ‘ಕಾರ್ಮಿಕ’ಶಬ್ದದ ವ್ಯಾಖ್ಯೆಯಡಿ ಕಾರ್ಮಿಕನಾಗಿರುತ್ತಾನೆ ಎಂದು ನ್ಯಾಯಾಲಯವು ಎತ್ತಿ ಹಿಡಿಯಿತು.







