ಮಾಜಿ ಪ್ರಧಾನಿ ಗೀಲಾನಿಯ ಮಗ ಪತ್ತೆ

ಇಸ್ಲಾಮಾಬಾದ್, ಮೇ 10: ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಮೂರು ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಆ ದೇಶದ ಮಾಜಿ ಪ್ರಧಾನಿ ಯೂಸುಫ್ ರಝಾ ಗೀಲಾನಿಯ ಮಗ ಅಲಿ ಹೈದರ್ ಗಿಲಾನಿಯನ್ನು ಅಫ್ಘಾನಿಸ್ತಾನದಲ್ಲಿ ಮಂಗಳವಾರ ಪತ್ತೆಹಚ್ಚಲಾಗಿದೆ.
ಅಫ್ಘಾನಿಸ್ತಾನ ಮತ್ತು ಅಮೆರಿಕ ಸೈನಿಕರು ಈ ನಿಟ್ಟಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.
‘‘ಅಲ್-ಖಾಯಿದದೊಂದಿಗೆ ಸಂಬಂಧ ಹೊಂದಿರುವ ಗುಂಪೊಂದು ಅಪಹರಣ ನಡೆಸಿದ ಮೂರು ವರ್ಷಗಳ ಬಳಿಕ ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿಯ ಮಗ ಅಲಿ ಹೈದರ್ ಗಿಲಾನಿಯನ್ನು ಅಫ್ಘಾನ್ ವಿಶೇಷ ಪಡೆಗಳು ಘಝ್ನಿ ಪ್ರಾಂತದಲ್ಲಿ ಮಂಗಳವಾರ ಬೆಳಗ್ಗೆ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಪತ್ತೆಹಚ್ಚಿದವು’’ ಎಂದು ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದ ರಾಯಭಾರಿ ಉಮರ್ ಝಕೀಲ್ವಾಲ್ ‘ಫೇಸ್‌ಬುಕ್’ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಅಫ್ಘಾನ್ ಮತ್ತು ಅಮೆರಿಕ ಪಡೆಗಳು ನಡೆಸಿದ ವಿಶೇಷ ಕಾರ್ಯಾಚರಣೆಯೊಂದರಲ್ಲಿ ಅಲಿಯನ್ನು ಪತ್ತೆಹಚ್ಚಲಾಯಿತು ಹಾಗೂ ಅವರು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಮರಳುತ್ತಾರೆ ಎಂದು ಪಾಕಿಸ್ತಾನದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.





