ಮೇ 12ರಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಸರಗೋಡಿಗೆ

ಕಾಸರಗೋಡು,ಮೇ 11: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇ 12ರಂದು ಕಾಸರಗೋಡಿಗೆ ಆಗಮಿಸುವರು. ಸಂಜೆ ಐದು ಗಂಟೆಗೆ ಉದುಮ ವಿಧಾನಸಭಾ ಕ್ಷೇತ್ರದ ಚಟ್ಟ೦ಚಾಲ್ ನಲ್ಲಿ ನಡೆಯುವ ಐಕ್ಯರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡುವರು.
ಕೋಯಿಕ್ಕೋಡ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಹೆಲಿಕಾಪ್ಟರ್ ನಲ್ಲಿ ಆಗಮಿಸುವ ಅವರು ಪೆರಿಯ ಕೇಂದ್ರ ವಿದ್ಯಾಲಯದ ಹೆಲಿಪ್ಯಾಡ್ ನಲ್ಲಿ ಬಂದಿಳಿಯುವರು.
ಅಲ್ಲಿಂದ ಕಾರು ಮೂಲಕ ಚಟ್ಟ೦ಚಾಲ್ ಗೆ ತಲುಪುವರು. ಸಮಾವೇಶದಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕೆಪಿಸಿಸಿ ಅಧ್ಯಕ್ಷ ವಿ . ಎಂ ಸುಧೀರನ್ , ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ , ಸಚಿವ ರಮೇಶ್ ಚೆನ್ನಿತ್ತಲ ಹಾಗೂ ಜಿಲ್ಲೆಯ ಐಕ್ಯರಂಗ ಅಭ್ಯರ್ಥಿಗಳು ಉಪಸ್ಥಿತರಿರುವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ. ಕೆ ಶ್ರೀಧರನ್ ತಿಳಿಸಿದ್ದಾರೆ.
ಸಮಾವೇಶದ ಬಳಿಕ ರಾಹುಲ್ ಗಾಂಧಿ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಿ ಅಲ್ಲಿಂದ ದೆಹಲಿಗೆ ಮರಳುವರು.
ರಾಹುಲ್ ಭೇಟಿ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 2.30 ರಿಂದ ಹಲವೆಡೆ ವಾಹನ ಸಂಚಾರ ದಲ್ಲಿ ಬದಲಾವಣೆ ತರಲಾಗಿದೆ. ಬಿಗು ಭದ್ರತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ





