ಅಮಿತಾಭ್ ಬಚ್ಚನ್ ಆದಾಯ ಮರು ಮೌಲ್ಯಮಾಪನ ನಡೆಸಲು ಐಟಿ ಇಲಾಖೆಗೆ ಸುಪ್ರೀಂ ಆದೇಶ

ಹೊಸದಿಲ್ಲಿ, ಮೇ 11:ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ 2001ರ ಆದಾಯ ಮರುಮೌಲ್ಯ ಮಾಪನ ನಡೆಸಲು ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.ಇದರೊಂದಿಗೆ ಬಿಗ್ ಬಿಗೆ ಹಿನ್ನಡೆಯಾಗಿದೆ.
2001-02ರ ಸಾಲಿನ ಆದಾಯ ತೆರಿಗೆಯ ಮರುಮೌಲ್ಯ ಮಾಪನ ನಡೆಸಲು ಕೋರಿ ಆದಾಯ ತೆರಿಗೆ ಇಲಾಖೆಯ ಆಯುಕ್ತರು ಸಲ್ಲಿಸಿದ್ದ ಮೇಲ್ಮನವಿಯನ್ನು 2012 ಜುಲೈನಲ್ಲಿ ಬಾಂಬೆ ಹೈಕೊರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಐಟಿ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
2002, ಅಕ್ಟೋಬರ್ 13ರಂದು ಅಮಿತಾಬ್ ಬಚ್ಚನ್ ಅವರು 2001-02ನೆ ಸಾಲಿಗೆ ಆದಾಯಕ್ಕೆ ಸಂಬಂಧಿಸಿದಂತೆ ತೆರಿಗೆ 14.99ಕೋಟಿ ರೂ. ಎಂದು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಅವರು ಶೇ.30ರಷ್ಟು ವೆಚ್ಚದ ಆದಾರದಲ್ಲಿ ತೆರಿಗೆ 8.11 ಕೋಟಿ ರೂ. ಎಂದು 2002, ಮಾರ್ಚ್ 31ರಂದು ಪರಿಷ್‌ಕೃತ ವರದಿ ಸಲ್ಲಿಸಿದ್ದರು. ಆದರೆ ಬಳಿಕ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದ ಅಮಿತಾಭ್ ಬಚ್ಚನ್ ಪರಿಷ್‌ಕೃತ ವರದಿಯನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಸಂಬಂಧಿಸಿದಂತೆ ಮರು ಪರಿಶೀಲನೆ ಮಾಡಬಾರದೆಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
2002-03ನೆ ಸಾಲಿನ ಆದಾಯ ತೆರಿಗೆ ಮೌಲ್ಯಮಾಪನವನ್ನು 2005ರ ಮಾರ್ಚ್ 29ರಂದು ಪೂರ್ಣಗೊಳಿಸಿದ್ದ ಆದಾಯ ತೆರಿಗೆ ಇಲಾಖೆಯ ಮೌಲ್ಯಮಾಪನ ಅಧಿಕಾರಿಗಳು ,ಆ ಸಾಲಿನಲ್ಲಿ ಅಮಿತಾಭ್ ಒಟ್ಟು ವರಮಾನ 56.41 ಕೋಟಿ ರೂ. ಎಂದು ನಿರ್ಧರಿಸಿದ್ದರು.
2006ರ ಎಪ್ರಿಲ್ 5ರಂದು ಆದಾಯ ತೆರಿಗೆ ಕಾಯ್ದೆಯ ಮರು ಮೌಲ್ಯಮಾಪನಕ್ಕೆ ಕ್ರಮವನ್ನು ಆರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಏಳು ಬ್ಯಾಂಕ್ ಖಾತೆಗಳನ್ನು ಹೊಂದಿರುವುದಾಗಿ ಹೇಳಿದ್ದ ಅಮಿತಾಭ್ ಕೇವಲ 6ಖಾತೆಗಳ ವಿವರ ನೀಡಿರುವುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.
ಆದಾಯ ತೆರಿಗೆ ಇಲಾಖೆಯ ಕ್ರಮವನ್ನು ಅಮಿತಾಭ್ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.





