ಸರಕಾರಿ ಕರಪತ್ರವಾಗಲಿರುವ ಪಿಎಚ್‌ಡಿ ಸಂಶೋಧನೆಗಳು
ರಾಜಕಾರಣಿಗಳ ಪ್ರವೇಶವಿಲ್ಲದೆ, ಕೇವಲ ಪ್ರೊಫೆಸರ್‌ಗಳ ರಾಜಕಾರಣಕ್ಕೆ ಸಿಲುಕಿ ನಮ್ಮ ಪಿಎಚ್‌ಡಿಗಳು ಎಷ್ಟು ಗಬ್ಬೆದ್ದುಹೋಗಿವೆ ಎನ್ನುವುದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ವಿಶ್ವವಿದ್ಯಾನಿಲಯಗಳೆಂದರೆ, ಪಿಎಚ್‌ಡಿ ಪ್ರಬಂಧಗಳ ಗೋದಾಮುಗಳು ಎಂಬ ಟೀಕೆಯೇ ಇದೆ. ಒಂದು ಪಿಎಚ್‌ಡಿಯ ಹಿಂದೆ ಸಾವಿರ ಲಾಬಿಗಳು, ಪ್ರಭಾವಗಳು, ಮಾನಸಿಕ ಹಿಂಸೆ, ದೌರ್ಜನ್ಯಗಳು, ಪ್ರೊಫೆಸರ್‌ಗಳ ಸ್ವಾರ್ಥಗಳು ಕಂಡೂ ಕಾಣದಂತೆ ತಳುಕು ಹಾಕಿಕೊಂಡಿರುತ್ತವೆ. ವಿಶ್ವವಿದ್ಯಾನಿಲಯಗಳಿಂದ ಹೊರ ಬರುವ ಥೀಸಿಸ್‌ಗಳಲ್ಲಿ ಶೇ.10ರಷ್ಟು ಮಾತ್ರ ಪ್ರಾಮಾಣಿಕ ಮತ್ತು ವೌಲ್ಯಯುತ ಅಧ್ಯಯನಗಳಾಗಿರುತ್ತವೆ. ಉಳಿದಂತೆ, ಕೇವಲ ಡಾಕ್ಟರೇಟ್ ಪದವಿಯ ಉದ್ದೇಶದಿಂದಷ್ಟೇ ಕಾಟಾಚಾರಕ್ಕೆ ಮಾಡುವ ಪ್ರಬಂಧಗಳಾಗಿರುತ್ತವೆ. ಪಿಎಚ್‌ಡಿ ಪ್ರಬಂಧಗಳ ಕುರಿತಂತೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿರುವುದು ಇಂದು ನಿನ್ನೆಯಲ್ಲ. ಹೀಗಿರುವಾಗ, ಈ ಪ್ರಬಂಧಗಳ ಮೇಲೆ ನೇರವಾಗಿ ರಾಜಕೀಯಗಳು ಹಸ್ತಕ್ಷೇಪ ಮಾಡಿದರೆ ಅದರ ಸ್ಥಿತಿ ಹೇಗಾಗಬಹುದು? ಈ ಪ್ರಶ್ನೆ ಕೇವಲ ಗುಜರಾತ್‌ನ ವಿಶ್ವವಿದ್ಯಾನಿಲಯಗಳನ್ನು ಮಾತ್ರವಲ್ಲ, ಇಡೀ ದೇಶದ ಶಿಕ್ಷಣ ತಜ್ಞರು, ಚಿಂತಕರನ್ನು ಕಾಡುತ್ತಿದೆ. ಸಾಧಾರಣವಾಗಿ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಸಂಶೋಧನಾ ವಿಷಯಗಳ ಪಟ್ಟಿಯನ್ನು ನೀಡುವುದು ಆಯಾ ಮಾರ್ಗದರ್ಶಕರು. ಆದರೆ ಗುಜರಾತ್‌ನಲ್ಲಿ ವಿಶ್ವವಿದ್ಯಾನಿಲಯಗಳ ಮೇಲೆ ಬೇರೆಯದೇ ಆದ ಪ್ರಯೋಗವನ್ನು ನಡೆಸಲು ಸರಕಾರ ಹವಣಿಸುತ್ತಿದೆ. ಗುಜರಾತ್‌ನ ಬಿಜೆಪಿ ಸರಕಾರವು ರಾಜ್ಯದ ವಿಶ್ವವಿದ್ಯಾನಿಲಯಗಳ ಪಿಎಚ್‌ಡಿ ವಿದ್ಯಾರ್ಥಿಗಳು ತಮ್ಮ ಡಾಕ್ಟರೇಟ್ ಪ್ರಬಂಧಗಳಿಗಾಗಿ ಸಂಶೋಧನೆ ನಡೆಸಲು 82 ವಿಷಯಗಳ ಪಟ್ಟಿಯೊಂದನ್ನು ರೂಪಿಸಿದೆ. ಈ ಸರಕಾರಿ ಪ್ರಾಯೋಜಿತ ಪಟ್ಟಿಯಿಂದ ಕನಿಷ್ಠ ಐದು ವಿಷಯಗಳನ್ನಾದರೂ ವಿದ್ಯಾರ್ಥಿಯು ಆಯ್ದುಕೊಳ್ಳುವುದನ್ನು ಖಾತರಿಪಡಿಸಿಕೊಳ್ಳುವಂತೆ ಗುಜರಾತ್ ಸರಕಾರವು ತನ್ನ ರಾಜ್ಯದ ಪ್ರತಿಯೊಂದು ವಿವಿಗೂ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನ ಹಾಗೂ ಗುಜರಾತ್ ಸರಕಾರದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಾದ ಕನ್ಯಾ ಖೇಲವಾಣಿ (ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ), ಗುಣೋತ್ಸವ (ಪ್ರಾಥಮಿಕ ಶಿಕ್ಷಣದ ಸುಧಾರಣೆ) ಹಾಗೂ ಎಂ.ಎ. ಯೋಜನೆ ( ಬಡವರಿಗಾಗಿ ಆರೋಗ್ಯ ಯೋಜನೆ) ಕೂಡಾ ಈ ಪಟ್ಟಿಯಲ್ಲಿ ರುವ ಸಂಶೋಧನಾ ವಿಷಯಗಳಾಗಿವೆ.
ಅಂದರೆ ವಿಶ್ವವಿದ್ಯಾನಿಲಯಗಳ ಸಂಶೋಧನಾ ಪ್ರಬಂಧಗಳನ್ನು ತನ್ನ ಕರಪತ್ರವನ್ನಾಗಿಸಲು ಸರಕಾರ ಹವಣಿಸಿದೆ. ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‌ಗಳ ಬೌದ್ಧಿಕ ಆಸಕ್ತಿಯನ್ನು ಬದಿಗೆ ತಳ್ಳಿ, ಬಲವಂತವಾಗಿ ರಾಜಕೀಯ ಪ್ರೇರಿತ ವಿಷಯಗಳನ್ನು ಅವರ ಮೇಲೆ ಹೇರಲು ಹೊರಟಿದೆ ಅಲ್ಲಿನ ಸರಕಾರ. ಈ ಪಟ್ಟಿಯು ಸರಕಾರದ ಉನ್ನತ ಅಧಿಕಾರಿಗಳ ತರಬೇತಿ ಕೈಪಿಡಿಯಂತೆ ಓದಿಸಿಕೊಂಡು ಹೋಗುತ್ತದೆಯೇ ಹೊರತು, ವಿದ್ವಾಂಸರ ಅಥವಾ ಚಿಂತಕರ ಸಂಶೋಧನಾತ್ಮಕ ವಿಷಯಗಳೆಂದು ಅನಿಸುವುದೇ ಇಲ್ಲ. ಸರಕಾರದ ಅನಿಸಿಕೆಯ ಪ್ರಕಾರ, ಪಿಎಚ್‌ಡಿ ವಿದ್ಯಾರ್ಥಿಗಳು ತಮ್ಮ ನಿರ್ದಿಷ್ಟ ಬೌದ್ಧಿಕ ಆಸಕ್ತಿಯ ವಿಷಯಗಳ ಬಗ್ಗೆ ಸಂಶೋಧನೆ ನಡೆಸುವ ಬದಲು, ಬಲವಂತವಾಗಿ ರಾಜಕೀಯ ಪ್ರೇರಿತ ವಿಷಯಗಳ ಬಗ್ಗೆ ಅಧ್ಯಯನ ನಡೆಸುವಂತಾಗಿದೆ. ಸರ್ದಾರ್ ಪಟೇಲ್ ಆವಾಸ್ ಯೋಜನೆ ಹಾಗೂ ಇಂದಿರಾ ಆವಾಸ್ ಯೋಜನೆ ನಡುವಿನ ತುಲನಾತ್ಮಕ ಅಧ್ಯಯನ, ಅಲ್ಪಸಂಖ್ಯಾತರ ಶಿಕ್ಷಣ-ಒಂದು ವಿಮರ್ಶಾತ್ಮಕ ಅಧ್ಯಯನ, ಗುಜರಾತ್: ಬೆಳವಣಿಗೆ, ವೈಜ್ಞಾನಿಕ ನಿರ್ವಹಣೆ ಹಾಗೂ ಅಭಿವೃದ್ಧಿ - ಮಾದರಿ, ಭವಿಷ್ಯದ ನಡೆ ಹಾಗೂ ನೀತಿ ಸಲಹೆಗಳ ಕುರಿತ ವಿಮರ್ಶಾತ್ಮಕ ಅಧ್ಯಯನ, ರಾಜ್ಯಗಳ ಕಾರ್ಯಯೋಜನೆಗಳ ನಡುವೆ ಪರಸ್ಪರ ಸಹಕಾರ ಹಾಗೂ ಅಭಿವೃದ್ಧಿಗಾಗಿನ ಕಾರ್ಯತಂತ್ರಗಳಲ್ಲಿ ತುಲನಾತ್ಮಕ ವಿಶ್ಲೇಷಣೆ-ಗುಜರಾತ್ ಮಾದರಿ ಹಾಗೂ ಸೌನಿ ಯೋಜನೆಗಳ ಮೂಲಕ ಏಳು ಜಲಾಶಯಗಳಲ್ಲಿ ನೀರಿನ ಹೆಚ್ಚಳ ಕುರಿತ ಸಮಗ್ರ ವಿಶ್ಲೇಷಣೆ ಇತ್ಯಾದಿ ವಿಷಯಗಳು ಈ ಪಟ್ಟಿಯಲ್ಲಿವೆ.
ಸಂಶೋಧನಾ ವಿದ್ಯಾರ್ಥಿಗಳು ರಾಜ್ಯಾಡಳಿತದ ಸಹಾಯಕರಂತೆ ಕೆಲಸ ಮಾಡಬೇಕೆಂದು ಗುಜರಾತ್‌ನ ಬಿಜೆಪಿ ಸರಕಾರ ಬಯಸಿದೆ. ತಮ್ಮ ಸಂಶೋಧನೆಯ ಮೂಲಕ ರಾಜ್ಯದ ಆಡಳಿತ ಹಾಗೂ ನೀತಿ ನಿರೂಪಣೆ ವ್ಯವಸ್ಥೆಗೆ ಮಾಹಿತಿಗಳನ್ನು ಒದಗಿಸಬೇಕೆಂಬ ಉದ್ದೇಶ ಅದರದ್ದಾಗಿದೆ. ಸರಕಾರಿ ಕಾರ್ಯಕ್ರಮಗಳ ವಿಮರ್ಶಾತ್ಮಕ ವೌಲ್ಯಮಾಪನ ನಡೆಯುವುದನ್ನು ಖಾತರಿಪಡಿಸುವ ಚಿಂತನೆ ಇದಾಗಿದೆಯಂದು ರಾಜ್ಯ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರಿ. ಒಬ್ಬ ಸಂಶೋಧಕ ಸರಕಾರದ ಯೋಜನೆಗಳನ್ನೇ ವಿಷಯವಾಗಿ ಆಯ್ದುಕೊಂಡು, ಅದರಲ್ಲಿ ನಡೆದಿರುವ ಅಕ್ರಮಗಳು, ಅದರ ವೈಫಲ್ಯಗಳು ಮತ್ತು ಅದಕ್ಕೆ ಕಾರಣವಾಗಿರುವ ಜನರ ಬಗ್ಗೆ ಸಂಶೋಧಿಸಿ, ಅದನ್ನು ಪ್ರಬಂಧವಾಗಿ ಮಂಡಿಸಿದರೆ, ಆ ಪ್ರಬಂಧ ಆತನಿಗೆ ಡಾಕ್ಟರೇಟ್‌ನ್ನು ತಂದು ಕೊಡುವುದಕ್ಕೆ ಸಾಧ್ಯವಿದೆಯೇ? ಅದನ್ನು ಅಂತಿಮವಾಗಿ ತೀರ್ಪುಗಾರರ ತಂಡ ಒಪ್ಪಿಕೊಳ್ಳಲು ಸಾಧ್ಯವಿದೆಯೇ? ಸರಕಾರದ ಉದ್ದೇಶವೇ, ಪ್ರಬಂಧದ ಮೂಲಕ ತನ್ನ ಕಾರ್ಯಕ್ರಮಗಳನ್ನು ವೈಭವೀಕರಿಸುವುದಾಗಿರುವಾಗ, ಪ್ರಾಮಾಣಿಕ ಸಂಶೋಧನೆಗೆ ಇಲ್ಲಿ ಆಸ್ಪದವಾದರೂ ಎಲ್ಲಿದೆ? ಸರಕಾರದ ಯೋಜನೆಗಳ ಬಗ್ಗೆ ಈ ಹಿಂದೆಯೂ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ನಡೆದಿದ್ದವು. ಅದು ಸರಕಾರದ ಒತ್ತಡ, ಹೇರಿಕೆಯ ಪ್ರಭಾವದಿಂದಲ್ಲ. ಸ್ವತಃ ವಿದ್ಯಾರ್ಥಿಗಳೇ ಅದನ್ನು ಆಸಕ್ತಿಯಿಂದ ಆರಿಸಿಕೊಂಡಿದ್ದರು. ಕೆಲವು ಯೋಜನೆಗಳು ಸಮಾಜದ ಮೇಲೆ, ಜನರ ಮೇಲೆ ಬೀರಿದ ಪರಿಣಾಮಗಳನ್ನು ಆಸಕ್ತಿಯಿಂದ ಅಧ್ಯಯನ ನಡೆಸಿ, ಅದರ ಸಾಧಕ ಬಾಧಕಗಳನ್ನು ಮಂಡಿಸುವುದು ಬೇರೆ ಸರಕಾರವೇ ವಿಷಯಕೊಟ್ಟು ಸಂಶೋಧಕನ ಕೈಯಲ್ಲಿ ಬರೆಸುವುದು ಬೇರೆ. ಇದು ನಿಜಕ್ಕೂ ವಿಶ್ವವಿದ್ಯಾನಿಲಯದ ಅಳಿದುಳಿದ ವಿಶ್ವಾಸಾರ್ಹತೆಯನ್ನು ಸರ್ವನಾಶ ಮಾಡುತ್ತದೆ. ಉನ್ನತ ಶಿಕ್ಷಣದ ಬಗ್ಗೆ ಬಿಜೆಪಿ ಪ್ರದರ್ಶಿಸುತ್ತಿರುವ ಧೋರಣೆಗನ್ನು ಗಮನಿಸಿದಾಗ, ಆ ಪಕ್ಷವು ಆರೆಸ್ಸೆಸ್ ನಡೆಸುತ್ತಿರುವ ಶಾಲೆಗಳಾದ ಶಿಶುಮಂದಿರ ಹಾಗೂ ವಿಶ್ವವಿದ್ಯಾನಿಲಯಗಳ ನಡುವೆ ವ್ಯತ್ಯಾಸವನ್ನು ಕಾಣಲು ವಿಫಲವಾಗಿದೆಯೆಂಬ ಭಾವನೆ ಮೂಡುತ್ತದೆ. ಆರೆಸ್ಸೆಸ್‌ನ ಶಿಶುಮಂದಿರಗಳಲ್ಲಿ ರಾಜಕೀಯ, ಧರ್ಮ ಹಾಗೂ ಸಮಾಜಕ್ಕೆ ಸಂಬಂಧಿಸಿದ ಏಕರೂಪದ ಚಿಂತನೆಯನ್ನು ಮಕ್ಕಳಿಗೆ ಬೋಧಿಸಲಾಗುತ್ತದೆ. ಆದರೆ ಬಹುಮುಖಿ ಹಾಗೂ ವಿಭಿನ್ನ ಚಿಂತನೆಗಳ ವಿನಿಮಯದ ತಾಣವಾದ ವಿಶ್ವವಿದ್ಯಾನಿಲಯಗಳು ಇದಕ್ಕಿಂತ ತೀರಾ ತದ್ವಿರುದ್ಧವಾಗಿದೆ. ವಿಶ್ವವಿದ್ಯಾನಿಲಯಗಳನ್ನು ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ಸಂಪೂರ್ಣ ಕಳಂಕಗೊಳಿಸಿ, ಅದನ್ನು ರಾಜಕೀಯ ಮತ್ತು ಜಾತೀಯ ತಾಣವಾಗಿಸುವುದಕ್ಕೆ ಹೊರಟಿರುವ ಸರಕಾರದ ಈ ಕ್ರಮವನ್ನು ದೇಶದ ಚಿಂತಕರು, ಶಿಕ್ಷಣ ತಜ್ಞರು, ಉಪನ್ಯಾಸರು, ವಿದ್ಯಾರ್ಥಿಗಳು ಜತೆಗೂಡಿ ತಡೆಯಬೇಕಾಗಿದೆ. ಇಲ್ಲವಾದರೆ ಮುಂದೊಂದು ದಿನ, ವಿಶ್ವವಿದ್ಯಾನಿಲಯಗಳು ಈ ದೇಶವನ್ನು ಮನುವಾದಿಯ ಕಾಲಕ್ಕೆ ಒಯ್ಯುವುದರಲ್ಲಿ ಎರಡು ಮಾತಿಲ್ಲ.







