ಲಕ್ಯಾ ಡ್ಯಾಂನ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಜಿಲ್ಲಾಧಿಕಾರಿ ಆದೇಶ

ಮಂಗಳೂರು,ಮೇ11: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಲಕ್ಯಾ ಡ್ಯಾಂನಿಂದ ಕೆಐಒಸಿಎಲ್ ಘಟಕಕ್ಕೆ ಪೈಪ್‌ಲೈನ್ ಮೂಲಕ ಸರಬರಾಜು ಆಗುತ್ತಿರುವ 2 ಎಂಜಿಡಿ ನೀರನ್ನು ಮೇ 31ರವರೆಗೆ ಸುರತ್ಕಲ್ ಹಾಗೂ ಆಸುಪಾಸಿನ ವಾರ್ಡ್‌ಗಳಿಗೆ ಬಳಕೆ ಮಾಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಆದೇಶಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಮನಪಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಈ ಆದೇಶದ ಬಗ್ಗೆ ತಿಳಿಸಿದರು.
ಲಕ್ಯಾ ಡ್ಯಾಂನಿಂದ ಪಣಂಬೂರು ಕೆಐಒಸಿಎಲ್‌ಗೆ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತಿದ್ದು, ಇದನ್ನು ಪ್ರಸ್ತುತ ಕೆಐಒಸಿಎಲ್ ಬಳಸುತ್ತಿದೆ. ಸರಕಾರದ ಸುತ್ತೋಲೆಯಂತೆ ಜಲಾಶಯದ ನೀರನ್ನು ಕುಡಿಯುವ ನೀರಿಗೆ ಬಳಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೆಐಒಸಿಎಲ್‌ಗೆ ಸರಬರಾಜಾಗುವ ಈ ನೀರನ್ನು ಪಂಪ್ ಮಾಡಿ ಪಣಂಬೂರು, ಸುರತ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಉಪಯೋಗಿಸಲು ನಾಳೆಯಿಂದಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮನಪಾ ಆಯುಕ್ತರಿಗೆ ಸಭೆಯಲ್ಲಿ ಸೂಚನೆ ನೀಡಿದರು.
ಪ್ರಸ್ತುತ ಕೆಐಒಸಿಎಲ್ ಪೈಪ್‌ಲೈನ್‌ನಿಂದ ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಗೆ ನೀರನ್ನು ಹರಿಸಲು ಅಗತ್ಯವಿರುವ ಕಾಮಗಾರಿ ಹಾಗೂ ಖರ್ಚುವೆಚ್ಚವನ್ನು ನಗರ ಪಾಲಿಕೆ ಭರಿಸತಕ್ಕದ್ದು, ಈ ವ್ಯವಸ್ಥೆ ಹಾಲಿ ಇರುವ ತುರ್ತು ಸನ್ನಿವೇಶದಲ್ಲಿ ಕುಡಿಯುವ ನೀರಿಗಾಗಿ ಮಾತ್ರ ಮಾಡಲಾಗಿದ್ದು, ಇದನ್ನು ಹಕ್ಕಾಗಿ ಪರಿಗಣಿಸುವಂತಿಲ್ಲ ಹಾಗೂ ಈ ಆದೇಶವು ಸರ್ವೋಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯದ ತೀರ್ಮಾನಕ್ಕೆ ಒಳಪಟ್ಟಿದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.







