ಮೊದಲ ತನಿಖಾ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲು ಒತ್ತಾಯ
ಐತ್ತೂರು ಹಣ ದುರುಪಯೋಗ ಪ್ರಕರಣ
ಪುತ್ತೂರು, ಮೇ 11: ಐತ್ತೂರು ಗ್ರಾಮದ ಒಂದನೆ ವಾರ್ಡ್‌ನ ರಸ್ತೆ ಅಭಿವೃದ್ಧಿ ಹೆಸರಲ್ಲಿ ಸುಳ್ಳು ದಾಖಲೆ ಸೃಷ್ಟಿಸಿದ ಆಪಾದನೆಯ ಬಗ್ಗೆ ಒಂದು ಬಾರಿ ತನಿಖೆ ನಡೆಸಲಾಗಿದ್ದು, ತನಿಖೆ ಪೂರ್ಣಗೊಂಡಿದೆ. ಇದೀಗ ಮರು ತನಿಖೆಯನ್ನು ಜಿಲ್ಲಾಡಳಿತ ನಡೆಸುತ್ತಿರುವುದು ಸರಿಯಲ್ಲ. ಮೊದಲ ಬಾರಿ ನಡೆಸಿದ ತನಿಖೆಯ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಪಿ.ರಾಮಣ್ಣ ರೈ ಆಗ್ರಹಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2014-15ನೆ ಸಾಲಿನಲ್ಲಿ ರಸ್ತೆ ಅಭಿವೃದ್ಧಿ ಹೆಸರಲ್ಲಿ 2,34,000 ರೂ.ಗೆ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂದು ದೂರು ನೀಡಲಾಗಿತ್ತು. ಈ ಬಗ್ಗೆ ಜಿಪಂ ಸಿಇಒ ಯೋಜನಾ ನಿರ್ದೇಶಕರ ಮೂಲಕ ತನಿಖೆ ಮಾಡಿಸಿದ್ದರು. ಆಗ ಸದಸ್ಯರಾಗಿದ್ದ ಸತೀಶ್ ಪೂಜಾರಿ ಕುಮ್ಮಕ್ಕಿನಿಂದಲೇ ಎಲ್ಲವನ್ನೂ ತಯಾರು ಮಾಡಲಾಗಿದೆ. ಯಾವುದೇ ನಿಯಮ ಪಾಲನೆಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದರು. ಆದರೆ 10 ತಿಂಗಳ ಬಳಿಕ ಮರು ತನಿಖೆ ನಡೆಸಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಹೇಳಿದರು.
ಮರು ತನಿಖೆಗೆ ಬಂದಿರುವ ತ್ರಿಸದಸ್ಯ ತಂಡ ಮಾಹಿತಿ ಸಂಗ್ರಹಿಸುವ ವೇಳೆ, ಹಿಂದಿನ ತನಿಖೆಗೆ ವ್ಯತಿರಿಕ್ತವಾಗಿ ವರ್ತಿಸುತ್ತಿದೆ. ಆಪಾದಿತರಿಗೆ ಅನುಕೂಲವಾಗುವಂತೆ ಹೇಳಿಕೆ ಪಡೆಯಲು ಪ್ರಯತ್ನಿಸುತ್ತಿದೆ. ಪ್ರಕರಣದಲ್ಲಿ ಸಿಲುಕಿಲಿರುವ ಪುತ್ತೂರು ಜಿಪಂ ಸಹಾಯಕ ಅಭಿಯಂತರ ಪ್ರಭಾಶ್ಚಂದ್ರ ಎಂಬವರನ್ನು ರಕ್ಷಿಸುವ ಉದ್ದೇಶದಿಂದ ಮರು ತನಿಖೆ ನಡೆಸಲಾಗುತ್ತಿದೆ ಎಂಬ ಅನುಮಾನ ಹುಟ್ಟಿದೆ. ತನಿಖೆಗೆ ಬರುವಾಗ ನೋಟಿಸ್ ನೀಡದೆ ಏಕಾಏಕಿ ಬಂದು ಪ್ರಶ್ನಿಸಲಾಗಿದೆ. ಆದ್ದರಿಂದ 2015ರ ಜುಲೈ 23ರಂದು ನಡೆಸಿದ ತನಿಖಾ ವರದಿಯನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಐತ್ತೂರು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಶೇಷಪ್ಪ ಗೌಡ, ಕಲ್ಲಾಜೆ ಶ್ರೀರಾಮ ದೇವಾಲಯದ ಮಾಜಿ ಅಧ್ಯಕ್ಷ ಮುನಿರತ್ನಂ ಉಪಸ್ಥಿತರಿದ್ದರು.







