ಮೇ 12ರಂದು ಮಂಗಳೂರು ವಿವಿಯಲ್ಲಿ ಕನಕ ಸ್ಮತಿ ಕಾರ್ಯಕ್ರಮ
ಕೊಣಾಜೆ, ಮೇ 11: ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ‘ಕನಕ ಸ್ಮತಿ’ ಎಂಬ ವಿಶೇಷ ಕಾರ್ಯಕ್ರಮವು ಮೇ 12ರಂದು ಅಪರಾಹ್ನ 2:30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ಸೆನೆಟ್ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಬೆಂಗಳೂರಿನ ಸಂಸ್ಕೃತಿ ಚಿಂತಕ ಪ್ರೊ.ಒ.ಎಲ್. ನಾಗಭೂಷಣ ಸ್ವಾಮಿ ನೀಡಲಿದ್ದು, ಮಂಗಳೂರು ವಿ.ವಿ.ಕುಲಪತಿ ಪ್ರೊ.ಕೆ. ಭೈರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂತರ್ ಕಾಲೇಜು ಮತ್ತು ಸಾರ್ವಜನಿಕ ಮಟ್ಟದ ‘ಕನಕ ಕೀರ್ತನ’ ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಗದು ಪುರಸ್ಕಾರ, ಕನಕ ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಹಾಗೂ ಮಂಗಳೂರು ವಿ.ವಿ, ಕಣ್ಣೂರು ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ವೈದ್ಯಕೀಯ ಶಿಕ್ಷಣ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರಗಳ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಆಡಳಿತವರ್ಗ ಮಟ್ಟದ ‘ಕನಕ ಗಂಗೋತ್ರಿ’ ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಗದು ಪುರಸ್ಕಾರ, ಕನಕ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ಈ ಸಂದರ್ಭದಲ್ಲಿ ನೀಡಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ. ಶಿವರಾಮ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.