ಆಟ್-ಪಾಟ್ ಪಡಿಪು ಶಿಬಿರಕ್ಕೆ ಚಾಲನೆ

ಮಡಿಕೇರಿ, ಮೇ 11: ಕೊಡವ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಗರದ ಕೊಡವ ಸಮಾಜದಲ್ಲಿ ಕೊಡವ ಮಕ್ಕಡ ಕೂಟ ಆಯೋಜಿಸಿರುವ ನಾಲ್ಕನೆ ವರ್ಷದ ಆಟ್-ಪಾಟ್ ಪಡಿಪು ಶಿಬಿರಕ್ಕೆ ಚಾಲನೆ ದೊರೆಯಿತು.
ನಗರದ ಕೊಡವ ಸಮಾಜದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ ಶಿಬಿರವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕೊಡವ ಭಾಷೆ, ಸಂಸ್ಕೃತಿ ಆಚಾರ-ವಿಚಾರಗಳನ್ನು ಬೆಳೆಸಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಸಮಾಜದ ಬಾಂಧವರು ಕೈಜೋಡಿಸಬೇಕೆಂದು ಕರೆ ನೀಡಿದರು.
ವಿವಿಧ ಕೊಡವ ಕೇರಿಗಳು, ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ದಿನದಿಂದ ದಿನಕ್ಕೆ ಕ್ಷೀಣಗೊಳ್ಳುತ್ತಿರುವ ಆಟ್ ಪಾಟ್ ಪಡಿಪು ತಂಡಗಳನ್ನು ಪುನರ್‌ರಚನೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಶಂಭು ಸುಬ್ಬಯ್ಯ ಅಭಿಪ್ರಾಯಪಟ್ಟರು.
ಮುಂದೆ ನಡೆಯಲಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಮೂಲ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಪ್ರತಿಯೊಬ್ಬರು ಸನ್ನದ್ಧರಾಗಿರಬೇಕು ಮತ್ತು ಸರ್ವರ ಪ್ರೋತ್ಸಾಹ ಅಗತ್ಯವೆಂದರು. ಶಿಬಿರದಲ್ಲಿ ಪಾಲ್ಗೊಳ್ಳುವುದು ಕರ್ತವ್ಯ ಎಂದು ಭಾವಿಸಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಆಗಮಿಸಿ ಯಶಸ್ವಿಗೊಳಿಸುವಂತೆ ಶಂಭುಸುಬ್ಬಯ್ಯ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ವಿ. ಅಯ್ಯಪ್ಪ ಮಾತನಾಡಿ, ಮೇ 11ರಿಂದ 24ರವರೆಗೆ ನಗರದ ಜನರಲ್ ತಿಮ್ಮಯ್ಯ ಶಾಲಾ ಆವರಣದಲ್ಲಿ ಆಟ್ ಪಾಟ್ ಪಡಿಪು ತರಬೇತಿ ಶಿಬಿರ ನಡೆಯಲಿದೆ. ಎಲ್ಲರ ಭಾಗವಹಿಸುವಿಕೆ ಹಾಗೂ ಸಹಕಾರ ಅಗತ್ಯ ಎಂದರು. ನಂತರ ಉಮ್ಮತ್ತಾಟ್ ಮತ್ತು ಬೊಳ್ಳ್‌ಕಾಟ್ ಕಾರ್ಯಕ್ರಮ ನಡೆಯಿತು.ಕೂಟದ ಕಾರ್ಯದರ್ಶಿ ಕರುಣ್ ಕಾಳಯ್ಯ, ಕೊಡವ ಸಮಾಜದ ಪದಾಧಿಕಾರಿಗಳು ಮತ್ತು ನಗರದ ವಿವಿಧ ಕೊಡವ ಕೇರಿಗಳ ಪದಾಧಿಕಾರಿಗಳು ಹಾಜರಿದ್ದರು.







