ಶಿಕಾರಿಪುರ: ಬರಗಾಲ ಪೀಡಿತ ಎಂದು ಘೋಷಿಸಲು ಶಿಫಾರಸು

ಶಿಕಾರಿಪುರ, ಮೇ 11: ಶಿಕಾರಿಪುರ ತಾಲೂಕು ಬರಗಾಲ ಪೀಡಿತ ಎಂದು ಘೋಷಿಸಲು ಸಂಪುಟ ಉಪಸಮಿತಿಯಲ್ಲಿ ಪೂರಕವಾದ ಮಾಹಿತಿ ಮೂಲಕ ಶಿಫಾರಸಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.
ಬುಧವಾರ ತಾಲೂಕಿನಲ್ಲಿ ಬರಪೀಡಿತ ಗ್ರಾಮ ಹಾಗೂ ಕೆರೆಗಳ ವೀಕ್ಷಣೆ ನಡೆಸಿ ಬಳಿಕ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 40 ವರ್ಷಗಳಿಂದ ಭೀಕರ ಬರಗಾಲದ ಸ್ಥಿತಿಇದ್ದು, ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರವಾಹ, ಬರಗಾಲ, ಆಲಿಕಲ್ಲು ಮಳೆ ಮತ್ತಿತರ ಪ್ರಕೃತಿ ವಿಕೋಪವನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಜೆಟ್ ನಲ್ಲಿ ಪ್ರತ್ಯೇಕ ಹಣವನ್ನು ಮೀಸಲಾಗಿಟ್ಟಿದ್ದು, ರಾಜ್ಯದ 27 ಜಿಲ್ಲೆಗಳಲ್ಲಿ ಕೆರೆಕಟ್ಟೆಗಳಲ್ಲಿನ ನೀರು ಸಂಗ್ರಹ ಗಣನೀಯವಾಗಿ ಕಡಿಮೆಯಾಗಿ ಅಂತರ್ಜಲ ಕುಸಿದಿದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,200 ಅಡಿ ಆಳದಲ್ಲಿ ನೀರು ದೊರಕುತ್ತಿಲ್ಲ ಎಂದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತು ರಾಜ್ಯ ಸರಕಾರ ಕುಡಿಯುವ ನೀರಿಗೆ, ಜಾನುವಾರುಗಳಿಗೆ ಮೇವು ದೊರಕಿಸಿಕೊಡಲು ವಿಶೇಷ ಗಮನ ಹರಿಸಿದೆ ಎಂದ ಅವರು, ಸರ್ವಪಕ್ಷ ನಿಯೋಗದೊಂದಿಗೆ ಕೇಂದ್ರಕ್ಕೆ 16 ಸಾವಿರ ಕೋಟಿ ರೂ. ನೆರವಿಗೆ ಸಲ್ಲಿಸಿದ ಮನವಿ ಮೇರೆಗೆ 1,540 ಕೋಟಿ ಮಾತ್ರ ಬಿಡುಗಡೆಗೊಳಿಸಿದೆ ಎಂದರು. ಕೇಂದ್ರ ಬಿಡುಗಡೆಗೊಳಿಸಿದ ಹಣ ಸಂಪೂರ್ಣ ಬಳಸಿಕೊಳ್ಳಲು ಸೂಚಿಸಿದ ಅವರು ವಾಪಸಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು.
ಈಗಾಗಲೇ ರಾಜ್ಯದ 136 ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಲಾಗಿದ್ದು ಶಿಕಾರಿಪುರವನ್ನು ಘೋಷಿಸಲು ಸಂಪುಟ ಉಪಸಮಿತಿಯಲ್ಲಿ ಶಿಫಾರಸಿಗೆ ಸೂಚಿಸುವುದಾಗಿ ತಿಳಿಸಿದರು. ಜಾನುವಾರುಗಳಿಗೆ ನೀರು ಮೇವು ಸಮಸ್ಯೆ ಯಾಗದಂತೆ ಹಣವನ್ನು ಬಿಡುಗಡೆಗೊಳಿಸಲಾಗಿದೆ.ಅಗತ್ಯವಿದ್ದಲ್ಲಿ ಗೋಶಾಲೆ. ಮೇವು ಬ್ಯಾಂಕ್ ಮೂಲಕ ರೈತರಿಗೆ ಕಡಿಮೆ ದರದಲ್ಲಿ ಮೇವು ನೀಡಲು ಕ್ರಮಕ್ಕೆ ಸೂಚಿಸಿದರು.
ಶಾಸಕ ರಾಘವೇಂದ್ರ, ತಾಲೂಕಿನಲ್ಲಿ ವಾಡಿಕೆಗಿಂತ ಶೇ.47 ಮಳೆಕೊರತೆಯಾಗಿದ್ದು, ಜಿಪಂ ಜಲಾನಯನ ಇಲಾಖೆಯ 1,171 ಕೆರೆಗಳಲ್ಲಿ 15 ರಲ್ಲಿ ಮಾತ್ರ ನೀರಿನ ಸಂಗ್ರಹವಿದೆ. ಸರಕಾರದಿಂದ ಪಂಚಾಯತ್ ವ್ಯಾಪ್ತಿಯಲ್ಲಿನ 800 ಬೋರ್‌ವೆಲ್‌ಗಳಲ್ಲಿ 500 ಸಂಪೂರ್ಣ ಬರಿದಾಗಿದ್ದು 200 ರಲ್ಲಿ ಅತೀ ಕಡಿಮೆ ಇದೆ ಎಂದರು.
1.78 ಟಿ.ಎಂ.ಸಿ ಸಾಮಥ್ಯದ 6,730 ಹೆಕ್ಟೇರ್‌ಗೆ ನೀರು ಹಾಯಿಸುವ ಅಂಜನಾಪುರ ಜಲಾಶಯದಲ್ಲಿ ಇದೀಗ ಕೇವಲ 0.40 ಹಾಗೂ ಅಂಬ್ಲಿಗೊಳ್ಳ ಜಲಾಶಯದಲ್ಲಿ 0.1 ಟಿ.ಎಂ.ಸಿ ಮಾತ್ರ ನೀರು ಇದೆ. 30 ಸಾವಿರ ಬೋರ್ ವೆಲ್‌ಗಳಲ್ಲಿ 10 ಸಾವಿರ ಬರಿದಾಗಿದ್ದು, ಉಳಿದವುಗಳಲ್ಲಿ ಅತೀ ಕಡಿಮೆಯಾಗಿದೆ. ಅಡಿಕೆ, ಬಾಳೆ, ಶುಂಠಿ ಮತ್ತಿತರ 9 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆಯಲ್ಲಿ 430 ಹೆಕ್ಟೇರ್ ಪೂರ್ಣ ನಾಶವಾಗಿದೆ.
ಬೆಳೆಹಾನಿಗೆ ಜಿಲ್ಲಾಧಿಕಾರಿಗಳು ಸಲ್ಲಿಸಿದ 5 ಕೋಟಿ ಪರಿಹಾರದಲ್ಲಿ ತಾಳಗುಂದ, ಸುಣ್ಣದಕೊಪ್ಪ ಹೋಬಳಿಗೆ 4.5 ಕೋಟಿರೂ. ನಷ್ಟವಾಗಿದ್ದು, ವಾಸ್ತವ ವಾಡಿಕೆ ಮಳೆಗಿಂತ ಶೇ.28 ಕೊರತೆ, ಸತತ 4 ವಾರದ ಶುಷ್ಕ ವಾತಾವರಣ ಮತ್ತಿತರ ಅಂಶವನ್ನು ಪರಿಗಣಿಸಿ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವಂತೆ ಆಗ್ರಹಿಸಿದ ಅವರು ಯುದ್ದೋಪಾದಿಯಲ್ಲಿ ಟ್ಯಾಂಕರ್ ಮೂಲಕ ಬರಪೀಡಿತ ಗ್ರಾಮಕ್ಕೆ ನೀರು ಸರಬರಾಜಿಗೆ ಆದೇಶಿಸುವಂತೆ ಹಾಗೂ ಕೇಂದ್ರದ 14 ನೆ ಹಣಕಾಸಿನ ಯೋಜನೆಯ 2 ನೆ ಹಂತದ ಬಿಡುಗಡೆಯಾದ ಹಣ ಪೂರ್ಣ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮೀಸಲಿಡುವಂತೆ ಮನವಿ ಮಾಡಿದರು.
ಈ ಸಂದರ್ಭ ನೀರಿನ ಸಮಸ್ಯೆ ಪರಿಹಾರಕ್ಕೆ ಸರಕಾರದಲ್ಲಿ ಹಣಕಾಸಿನ ತೊಂದರೆ ಇದೆ ಎಂದು ತಾಪಂ ಇಒ ಸಬೂಬು ಹೇಳುವ ಮೂಲಕ ಸರಕಾರಿ ಅಧಿಕಾರಿ ಸರಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಧಿಕ್ಕಾರದ ಘೋಷಣೆ ಹಾಕಿದರು.
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ವಿ.ಪ ಸದಸ್ಯ ಪ್ರಸನ್ನಕುಮಾರ್, ಕಾಡಾ ಅಧ್ಯಕ್ಷ ನಗರದ ಮಹದೇವಪ್ಪ, ಜಿಲ್ಲಾಧಿಕಾರಿ ವಿ.ಪಿ ಇಕ್ಕೇರಿ, ಉಪವಿಭಾಗಾಧಿಕಾರಿ ಸತೀಶ್ ಕುಮಾರ್, ತಹಶೀಲ್ದಾರ್ ಶಿವಕುಮಾರ್, ಇಒ ಲೋಹಿತ್, ಜಿಪಂ ಸದಸ್ಯ ನರಸಿಂಗನಾಯ್ಕ, ರೇಣುಕಾ, ಮಮತಾಸಾಲಿ ಮುಖಂಡ ಶಾಂತವೀರಪ್ಪಗೌಡ, ಗುರುಮೂರ್ತಿ, ವಸಂತಗೌಡ, ಗೋಣಿ ಮಾಲತೇಶ,ಮಹೇಶಹುಲ್ಮಾರ್,ಸುರೇಶ ಧಾರವಾಡದ, ರಮೇಶ್(ರಾಮಿ),ಭಂಡಾರಿ ಮಾಲತೇಶ, ಮಯೂರ ದರ್ಶನ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







