ರಾಜಸ್ಥಾನ ಬಿಜೆಪಿ ಸರಕಾರ ವಿರುದ್ಧ ಎನ್‌ಎಸ್‌ಯುಐ ಪ್ರತಿಭಟನೆ
ಪಠ್ಯಪುಸ್ತಕ ಕೇಸರೀಕರಣ

ಶಿವಮೊಗ್ಗ, ಮೇ 11: ರಾಜಸ್ಥಾನ ಸರಕಾರವು ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ವೇಳೆ ಉದ್ದೇಶಪೂರ್ವಕವಾಗಿ ದೇಶದ ಮೊದಲ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖ ಕಾಂಗ್ರೆಸ್ ನಾಯಕರ ಹೆಸರನ್ನು ಕೈಬಿಟ್ಟಿದೆ ಎಂದು ಆರೋಪಿಸಿ, ಎನ್‌ಎಸ್‌ಯುಐ ಕಾರ್ಯಕರ್ತರು ಬುಧವಾರ ನಗರದ ಮಹಾವೀರ ವೃತ್ತದಲ್ಲಿ ರಾಜಸ್ಥಾದ ಮುಖ್ಯಮಂತ್ರಿ ವಸಂತ್ ರಾಜ್ ರವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ದಿವಂಗತ ಜವಾಹರಲಾಲ್ ನೆಹರೂ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಲ್ಲದೆ, ದೇಶದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಶದ ಮೊದಲ ಪ್ರಧಾನಿಯಾಗಿ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಆದರೆ, ರಾಜಸ್ಥಾನ ಸರಕಾರ ಇಂತಹ ಮಹಾನ್ ನಾಯಕರ ಹೆಸರನ್ನು ಪಠ್ಯದಿಂದ ಕೈಬಿಟ್ಟಿದೆ. ಇನ್ನು ಅದೇ ರೀತಿ ರಾಜಸ್ಥಾನದ ಪ್ರೌಢಶಾಲೆಯ ಪರಿಷ್ಕೃತ ಪಠ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಹಲವು ಕಾಂಗ್ರೆಸ್ ನಾಯಕರ ಹೆಸರನ್ನು ಕೈಬಿಡಲಾಗಿದೆ. ಆ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲೂ ರಾಜಕಾರಣ ಮಾಡುತ್ತಿದೆ. ಪಠ್ಯಪುಸ್ತಕಗಳ ಕೇಸರೀಕರಣಕ್ಕೆ ಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಹಿಂದೆ ರಾಜಸ್ಥಾನದ ಪ್ರಾಥಮಿಕ ಶಿಕ್ಷಣ ಸಚಿವ ವಾಸುದೇವ್ ದೇವ್ನಾನಿಯವರು ಸರಕಾರ ಪಠ್ಯಪುಸ್ತಕ ಪುನಾರಚನೆ ಮಾಡಲಿದ್ದು, ರಾಜ್ಯದಲ್ಲಿ ಕನ್ನಯ್ಯ ಕುಮಾರ್‌ರವರಂತಹವರು ಹುಟ್ಟದಂತೆ ಎಚ್ಚರ ವಹಿಸಲಾಗುವುದು ಎಂದು ಬಾಲಿಶ ಹೇಳಿಕೆ ನೀಡಿದ್ದರು. ಅದೇ ರೀತಿ ಅವರು ಪಠ್ಯಪುಸ್ತಕ ರಚನೆಯಲ್ಲಿ ಬಿಜೆಪಿಯ ಮನಸ್ಥಿತಿಯನ್ನು ಬಹಿರಂಗಗೊಳಿಸಿದ್ದಾರೆ ಎಂದು ಕಿಡಿಕಾರಿದರು.
ಪಠ್ಯಪುಸ್ತಕದಲ್ಲಿ ದೇಶದ ಮೊದಲ ಪ್ರಧಾನಿಯ ಹೆಸರನ್ನೇ ಕೈಬಿಟ್ಟು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವಮಾನವನ್ನೇ ಸವೆಸಿದ ದೇಶಭಕ್ತರನ್ನು ಅಪಮಾನಿಸಿದ್ದಾರೆ. ಇಡೀ ಭಾರತೀಯರು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಶಿಕ್ಷಣವನ್ನು ಕೇಸರೀಕರಣ ಮಾಡಲು ಹೊರಟಿರುವ ರಾಜಸ್ಥಾನದ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕು. ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧ್ಯಾ ಮತ್ತು ಶಿಕ್ಷಣ ಸಚಿವೆ ದೇವ್ನಾನಿ ಬಹಿರಂಗವಾಗಿ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಪ್ರತಿಟನಾಕಾರರು ಆಗ್ರಹಿಸಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ, ಎನ್‌ಎಸ್‌ಯುಐ ರಾಜ್ಯ ಮುಖಂಡ ಸಿ.ಜೆ.ಮಧುಸೂದನ್, ಕೆ.ಚೇತನ್, ಜಿಲ್ಲಾಧ್ಯಕ್ಷ ಶ್ರೀಜಿತ್, ನಗರಾಧ್ಯಕ್ಷ ಬಾಲಾಜಿ, ಕಾರ್ಯಕರ್ತರಾದ ಮಸ್ತಾನ್, ಮುಹಮ್ಮದ್ ನಿಹಾಲ್, ಆರೀಫುಲ್ಲಾ ಮೊದಲಾದವರಿದ್ದರು.







