ಹಕ್ಕಿಜ್ವರ ಆತಂಕ ಬೇಡ : ಸಚಿವ ಅಭಯ
ಮಡಿಕೇರಿ, ಮೇ 11: ರಾಜ್ಯದಲ್ಲಿ ಹಕ್ಕಿ ಜ್ವರ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಪಶುಸಂಗೋಪನಾ ಇಲಾಖೆ ಸಚಿವ ಎ. ಮಂಜು ತಿಳಿಸಿದ್ದಾರೆ.
ಸೋಮವಾರಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬೀದರ್ ಜಿಲ್ಲೆಯ ಗಡಿ ಭಾಗದ ಹುಮ್ನಾಬಾದ್ ತಾಲೂಕಿನಲ್ಲಿ ಹಕ್ಕಿಜ್ವರ ಕಂಡು ಬಂದಿದ್ದು, ಜ್ವರ ಕಾಣಿಸಿಕೊಂಡಿರುವ ಕೋಳಿಗಳನ್ನು ನಾಶ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲಿಯೂ ಹಕ್ಕಿ ಜ್ವರ ಹರಡದಂತೆ ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಎಲ್ಲ ರಾಜ್ಯದ ಪಶುಸಂಗೋಪನಾ ಇಲಾಖೆಗಳಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಮೂರು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜನಮನ ಜನಾಭಿಪ್ರಾಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಸಚಿವರು, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದರು.
ಸರಕಾರಕ್ಕೆ ಮೇ 13 ರಂದು ಮೂರು ವರ್ಷ ಪೂರ್ಣಗೊಳ್ಳಲಿದ್ದು, ಪ್ರಥಮ ದಿನವೇ ಘೋಷಣೆ ಮಾಡಿದ ಜನಪರ ಕಾರ್ಯಕ್ರಮಗಳನ್ನು ಪ್ರಥಮ ವರ್ಷವೇ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಕಾಂಗ್ರೆಸ್ ಹೊಂದಿದೆ ಎಂದರು.
ಯಶಸ್ವಿ ಮೂರು ವರ್ಷ ಆಡಳಿತವನ್ನು ಪೂರೈಸಿ ನಾಲ್ಕನೆ ವರ್ಷದ ಹೊಸ್ತಿಲಿನಲ್ಲಿರುವ ಈ ಸಂದರ್ಭದಲ್ಲಿ ಸರಕಾರ ಕಳೆದ ಮೂರು ವರ್ಷಗಳ ಕಾರ್ಯಕ್ರಮಗಳನ್ನು ಜನತೆಯ ಸಮ್ಮುಖದಲ್ಲಿ ಅವಲೋಕಿಸುವುದು ಜನಾಭಿಪ್ರಾಯ ಪಡೆಯುವುದು ಜನಮನ ಜನಾಭಿಪ್ರಾಯ ಸಮಾವೇಶದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.







