ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಸಂಸ ಧರಣಿ

ಚಿಕ್ಕಮಗಳೂರು, ಮೇ 11: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಸದಸ್ಯರು ತಾಲೂಕು ಕಚೇರಿಯ ಆವರಣದಲ್ಲಿ ಬುಧವಾರ ಧರಣಿ ನಡೆಸಿದರು.
ಚಿಕ್ಕಮಗಳೂರು ತಾಲೂಕಿನ ಆಲ್ದೂರು, ಖಾಂಡ್ಯ, ವಸ್ತಾರೆ, ಅಂಬಳೆ ಅಟಲ್‌ಜಿ ನೆಮ್ಮದಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಲ್ಲದೆ ಮರಣ ಪ್ರಮಾಣಪತ್ರ, ಪಹಣಿ, ಎಂ.ಆರ್. ನಕಲುಗಳು, ಜಾತಿಪತ್ರಗಳು ಪಡೆಯಲು ತೊಂದರೆಯಾಗಿದ್ದು, ಕೂಡಲೇ ಅಧಿಕಾರಿಗಳನ್ನು ನೇಮಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಆಹಾರ ಪಡಿತರಚೀಟಿ ಶಾಖೆಗಳಲ್ಲಿ ಹೊಸ ಪಡಿತರ ಚೀಟಿಯನ್ನು ವಿತರಿಸದಿರುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಅಂಗವಿಕಲ ವೇತನ, ವಿಧವಾವೇತನಗಳನ್ನೂ ಸಮರ್ಪಕವಾಗಿನೀಡುತ್ತಿಲ್ಲ, ಕೂಡಲೇ ಕ್ರಮ ಜರಗಿಸಬೇಕೆಂದು ಧರಣಿ ನಿರತರು ಒತ್ತಾಯಿಸಿದರು.
ಬಿಪಿಎಲ್ ಮತ್ತು 11 ಸಾವಿರ ಆದಾಯವಿರುವ ಕುಟುಂಬಗಳಲ್ಲಿ ಮರಣ ಹೊಂದಿದರೆ ಅವರಿಗೆ 2ದಿನಗಳೊಳಗಾಗಿ ಮರಣ ಪ್ರಮಾಣಪತ್ರ ನೀಡಬೇಕೆಂಬ ಆದೇಶವಿದ್ದರೂ ಅಧಿ ಕಾರಿಗಳ ನಿರ್ಲಕ್ಷ್ಯದಿಂದ ದಾಖಲೆಗಳು ದೊರೆಯದೇ ಶವ ಸಂಸ್ಕಾರದ ಹಣ ಸರಕಾರಕ್ಕೆ ವಾಪಸ್ ಹೋಗುತ್ತಿದೆ. ಆದ್ದರಿಂದ ಮರಣ ಪ್ರಮಾಣ ಪತ್ರ ಪಡೆಯಲು 15 ದಿನಗಳ ಕಾಲಾವಕಾಶ ಕೊಡಿಸಿಕೊಡಬೇಕು ಮತ್ತು ದಾಖಲಾತಿಗಳನ್ನು ಒದಗಿಸಲು ಸಾಧ್ಯ ವಾಗದೇ ವಾಪಸ್ ಹೋಗಿರುವ ಫಲಾನುಭವಿಗಳ ಹಣವನ್ನು ಮರು ಪರಿಶೀಲಿಸಿ ಮಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ವಸ್ತಾರೆ ಹೋಬಳಿಯ ದಲಿತರ ಭೂಮಿಯನ್ನು ಸರ್ವೇ ಮಾಡಲು ದಾಖಲಾತಿಗಳನ್ನು ನೀಡಿ 5 ವರ್ಷಗಳು ಕಳೆದರೂ ಈವರೆಗೂ ಸರ್ವೇ ಮಾಡಿ ಕೊಟ್ಟಿಲ್ಲ. ಕೆಳಗಣೆ ಗ್ರಾಮದ ಸ.ನಂ. 109ರಲ್ಲಿ 4 ಎಕರೆಯ ಹಿರಿಗಯ್ಯ ಎಂಬವರ ಹೆಸರಿನಲ್ಲಿರುವ ದಾಖಲಾತಿ ಕಾಣೆಯಾಗಿದ್ದು, ಅದನ್ನು ಹುಡು ಕಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಈ ವೇಳೆ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕೆ.ಪಿ.ರಾಜರತ್ನಂ, ತಾಲೂಕು ಸಂಚಾಲಕ ಟಿ.ಎಲ್.ಗಣೇಶ್, ನಗರ ಸಂಚಾಲಕ ಅಣ್ಣಪ್ಪ, ಯಲಗುಡಿಗೆ ಬಸವರಾಜು, ಚಂದ್ರು, ಎಸ್.ಎಸ್.ಬಾಲಕೃಷ್ಣ ಬಿಳೇಕಲ್ಲು, ನಾಗರಾಜ್ ಮತ್ತಿತರರಿದ್ದರು.







