‘ಶಬ್ದ ಮಾಲಿನ್ಯದಿಂದ ವಿದ್ಯುತ್ ಉತ್ಪಾದನೆ’
ಚಿಕ್ಕಮಗಳೂರು, ಮೇ 11: ಒಮ್ಮೆಲೇ ಬಿಸಿ ನೀರು ಬರುವ ತಂತ್ರಜ್ಞಾನವನ್ನು ನಮ್ಮ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಯೋಜನೆಯಲ್ಲಿ ತೋರಿದ್ದು ಬಹು ದೊಡ್ಡ ಕ್ರಿಯಾಶೀಲತೆಗೆ ಮತ್ತು ಸಮಾಜ ಮುಖಿ ದೂರ ದೃಷ್ಟಿಗೆ ಸಾಕ್ಷಿಯಾಗಿದೆ ಎಂದು ನಗರದ ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ.ಸುಬ್ಬರಾಯ ಹೇಳಿದರು.
ನಗರದ ಎಐಟಿ ಕಾಲೇಜಿನ ವಿದ್ಯುತ್ ವಿಭಾಗದಲ್ಲಿ ಏರ್ಪಡಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರೊಜೆಕ್ಟ್ ಮತ್ತು ವಸ್ತು ಪ್ರದರ್ಶನದಲ್ಲಿ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಶಬ್ದ ಕಿರಿಕಿರಿಯಾಗುವ ಸಂಗತಿ. ಆದರೆ ಪೈಜೋ ಎಲೆಕ್ಟ್ರಿಕ್ ತಂತ್ರಜ್ಞ್ಞಾನದ ಸಹಾಯದಿಂದ ಶಬ್ದಮಾಲಿನ್ಯವನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿದರೆ ಸಮಾಜಕ್ಕೆ ಉಪಯೋಗವಾಗುವಂತಹ ಕೊಡುಗೆಯನ್ನು ನೀಡಬಹುದು ಮತ್ತು ಲಾಡ್ಜ್‌ಗಳಲ್ಲಿ, ಪಂಚತಾರ ಹೊಟೇಲ್‌ಗಳಲ್ಲಿ ಸ್ನಾನಕ್ಕೆ ಐದಾರು ಬಕೆಟ್ ತಣ್ಣನೆ ನೀರನ್ನು ವ್ಯರ್ಥವಾಗಿ ಚೆಲ್ಲಿದ ನಂತರ ಬಿಸಿ ನೀರು ಬರುತ್ತಿತ್ತು. ಆದರೆ, ಈಗ ಈ ತಂತ್ರಜ್ಞ್ಞಾನ ಅನುಕೂಲ ತರಲಿದೆ ಎಂದು ನುಡಿದರು.
ರಸ್ತೆಯಲ್ಲಿ ಸಂಚರಿಸುವ ವಾಹನಗಳ ಒತ್ತಡದಿಂದ ವಿದ್ಯುತ್ ಉತ್ಪಾದನೆ, ತಿರುಗುವ ಗೇಟ್‌ಗಳ ಮುಖಾಂತರ ವಿದ್ಯುತ್ ಉತ್ಪಾದನೆ, ಸೌರಶಕ್ತಿಯಿಂದ ಸ್ಮಾರ್ಟ್‌ಫೋನ್ ಮುಖಾಂತರ ಕೃಷಿ ಕೆಲಸಗಳನ್ನು ಸ್ವಯಂ ಚಾಲಿತವಾಗಿ ಮಾಡುವ ಉಪಕರಣ, ಬಹುಪಯೋಗಿ ಸೌರಶಕ್ತಿ ಚಾಲಿತ ಜಾಕೆೆಟ್, ಪೈಜೋ ಎಲೆಕ್ಟ್ರಿಕ್ ಸಹಾಯದಿಂದ ಶಬ್ದವನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣ, ಭೂಮಿಯ ಒಳಗಿನ ಕೇಬಲ್‌ಗಳಿಗೆ ಅಪಾಯವನ್ನು ತಡೆಯುವ ಉಪಕರಣ, ಪೌಷ್ಟಿಕ ಆಹಾರವನ್ನು ಸಂಸ್ಕರಿಸುವ ತಂತ್ರಜ್ಞಾನ, ಪವರ್ ಲೈನ್ಸ್‌ಗಳಿಗೆ ಲೋಡ್ ಶೆಡ್ಡಿಂಗ್ ಮಾಡುವ ಆಧುನಿಕ ವಿಧಾನ ಮತ್ತು ಅನೇಕ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವ ಸಮಾಜ ಮುಖಿ ಉಪಕರಣಗಳು ಪ್ರದರ್ಶನದಲ್ಲಿದ್ದವು.
ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ವೀಕ್ಷಿಸಿದ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ವಿದ್ಯಾರ್ಥಿಗಳ ಸಮಾಜಮುಖಿ ಬೆಳವಣಿಗೆಗಳನ್ನು ಕೊಂಡಾಡಿದರು. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಸಂತೋಷ್ ಬಾಬು ಅತ್ಯುತ್ತಮ ತಂತ್ರಜ್ಞಾನದ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಂದ ಕೇಳಿ ತಿಳಿದುಕೊಂಡರು.
ಪ್ರಥಮ ಬಹುಮಾನವನ್ನು ಜೀವನ್ ಮತ್ತು ಕಾರ್ತಿಕ್ ತಂಡ ಪಡೆಯಿತು. ದ್ವಿತೀಯ ಬಹುಮಾನವನ್ನು ವಾಗೀಶ್, ಸುಪ್ರಿಯಾ ತಂಡ, ಆಯಶಾಮೀರ್, ಮೇಘರಾಜ್ ತಂಡ ಕುಸುಮಾ, ನರಸಿಂಹಮೂರ್ತಿ ತಂಡ ಕ್ರಮವಾಗಿ ಪಡೆಯಿತು. ವಿದ್ಯುತ್ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಆರ್. ಮೋಹನ್, ಪ್ರಾಧ್ಯಾಪಕರಾದ ಬಿ.ಕಾಂತರಾಜ್, ನರಸಿಂಹೇಗೌಡ, ಶ್ರೀನಿವಾಸ್, ಕವಿತಾ, ಸತ್ಯನಾರಾಯಣ ರಾವ್ ಮತ್ತು ಪ್ರೊಜೆಕ್ಟ್ ಸಂಚಾಲಕ ಶಿಲ್ಪಾ ಮತ್ತಿತರರು ಉಪಸ್ಥಿತರಿದ್ದರು.







