ಕೃಷಿ ಮಾರುಕಟ್ಟೆ ಸೌಲಭ್ಯ ಪಡೆಯಲು ಸಚಿವ ಮಂಜು ಕರೆ
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಮಡಿಕೇರಿ, ಮೇ 11: ಕೃಷಿ ಮಾರುಕಟ್ಟೆಯ ಸೌಲಭ್ಯಗಳನ್ನು ಪ್ರತಿಯೊಬ್ಬ ರೈತರು ಪಡೆಯುವಂತೆ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ಎ.ಮಂಜು ಕರೆ ನೀಡಿದ್ದಾರೆ. ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಬಾರ್ಡ್ ಡಬ್ಲ್ಯುಐಎಫ್ 2014-15ನೆ ಯೋಜನೆ 2 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಮಾರುಕಟ್ಟೆ ರೈತರಿಗೆ ಮತ್ತು ವರ್ತಕರಿಗೆ ಅನುಕೂಲವಾಗುವಲ್ಲಿ ಸಹಕಾರಿಯಾಗಬೇಕಿದೆ. ಸ್ಥಳೀಯ ರೈತರು ಬೆಳೆಸಿದ ಕೃಷಿ ಉತ್ಪನ್ನಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಾರುಕಟ್ಟೆ ನಡೆಸಲು ಮತ್ತು ನ್ಯಾಯಯುತ ಬೆಲೆ ರೈತರಿಗೆ ಸಿಗುವಂತಾಗಲು ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸಿದೆ. ಇದರಿಂದ ರೈತರ ಸರ್ವ ತೋಮುಖ ಅಭಿವೃದ್ಧಿಗೆ ಕಾರಣವಾಗಿದೆ. ಇದರ ಸದುಪಯೋಗವನ್ನು ಪ್ರತಿ ರೈತರು ಪಡೆದುಕೊಳ್ಳುವಂತೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಎ.ಮಂಜು ಅವರು ಸಲಹೆ ನೀಡಿದರು.
ರಾಜ್ಯದಲ್ಲಿ ಕೃಷಿಕರಿಗೆ ಕೃಷಿ ಮಾರುಕಟ್ಟೆಯಲ್ಲಿ ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ಕೊಡುವ ನಿಟ್ಟಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ನೆರವಿನೊಂದಿಗೆ ಸ್ಥಳೀಯ ರೈತರ ಬೇಡಿಕೆಗೆ ಅನುಗುಣವಾಗಿ ಸುಸಜ್ಜಿತ ಕೃಷಿ ಮಾರುಕಟ್ಟೆಯನ್ನು ತೆರೆಯಲಾಗಿದೆ. ಇದರ ಪೂರ್ಣ ಪ್ರಮಾಣದ ಬಳಕೆ ಮಾಡುವಲ್ಲಿ ಸ್ಥಳೀಯ ರೈತರು ಮುಂದಾಗಬೇಕು. ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ದಲ್ಲಾಳಿಯ ಮೊರೆ ಹೋಗುವುದನ್ನು ತಪ್ಪಿಸಬೇಕು. ರೈತರು ನೇರವಾಗಿ ಕೃಷಿ ಮಾರುಕಟ್ಟೆಯ ಮೂಲಕ ಕೃಷಿ ಉತ್ಪನ್ನಗಳ ಆದಾಯಕ್ಕೆ ಅನುಗುಣವಾದ ಬೆಲೆ ಸಿಗುವಂತಾಗಲು ಮಾರುಕಟ್ಟೆಯ ಬಳಕೆ ಮಾಡುವಂತೆ ಸಚಿವರು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ಸ್ಥಳೀಯ ಕೃಷಿಕರಿಗೆ ನೂತನ ಕೃಷಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಮಾಡಲು ಉತ್ತಮ ವೇದಿಕೆಯಾಗಿದೆ. ಹಲವಾರು ವರ್ಷಗಳಿಂದ ಇದ್ದ ಮಾರುಕಟ್ಟೆಯ ಸ್ಥಿತಿ ಬದಲಾಗಿದೆ. ಸೋಮವಾರಪೇಟೆಯಲ್ಲಿ ಅತೀ ಹೆಚ್ಚು ಕೃಷಿಕರನ್ನು ಆಕರ್ಷಿಸುವಲ್ಲಿ ಕೃಷಿ ಮಾರುಕಟ್ಟೆ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ಸ್ಥಳೀಯ ರೈತರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದರು.
ಕುಶಾಲನಗರ ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಿ.ಬಿ.ಸತೀಶ್ ಮಾತನಾಡಿ, ರೈತರ ಹಿತಾಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಸುಸಜ್ಜಿತವಾಗಿಯು ಮತ್ತು ಶೀಘ್ರವಾಗಿ ಕಾಮಗಾರಿಯನ್ನು ನಡೆಸಿದೆ. ರೈತರ ಮೂಲಭೂತ ಸೌಕರ್ಯಕ್ಕೆ ಅನುಗಣವಾಗಿ 2 ಕೋಟಿ ರೂ. ವೆಚ್ಚದಲ್ಲಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಹಾಗೂ ಡ್ರೈನೇಜ್ ನಿರ್ಮಾಣ, ನಾಲ್ಕು ಮುಚ್ಚಿದ ಹರಾಜು ಕಟ್ಟೆ ನಿರ್ಮಾಣ ಮತ್ತಿತರ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು. ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷರಾದ ರಘುಹೆಬ್ಬಾಲೆ, ಜಿಪಂ ಸದಸ್ಯರಾದ ಪೂರ್ಣಿಮಾ ಗೋಪಾಲ್, ಚೌಡ್ಲು ಗ್ರಾಪಂ ಅಧ್ಯಕ್ಷರಾದ ವನಜಾಕ್ಷಿ, ಸೋಮವಾರಪೇಟೆ ತಹಶೀಲ್ದಾರ್ ಶಿವಪ್ಪ, ಪಶು ಸಂಗೋಪಣೆ ಇಲಾಖೆ ಉಪ ನಿರ್ದೇಶಕ ನಾಗರಾಜು, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಪ್ರಗತಿಪರ ರೈತ ವಿ.ಟಿ. ಚಂಗಪ್ಪ, ಮೈಸೂರು ಮಾರುಕಟ್ಟೆ ಅಭಿವೃದ್ಧಿ ಯೋಜನೆ ಅಧಿಕಾರಿ ಎಸ್.ಎಂ.ನಟರಾಜು ಉಪಸ್ಥಿತರಿದ್ದರು.







