ಜೀವಕ್ಕೆ ಹಾನಿಕರ ತರುತ್ತಿದೆಯೇ ಜೀವಜಲ?
ಸಾಲುಸಾಲಾಗಿ ಕಿಡ್ನಿ ವೈಫಲ್ಯಕ್ಕೆ ತುತ್ತಾಗುತ್ತಿರುವ ಗ್ರಾಮಸ್ಥರು, ಮಹಿಳೆಯ ಸಾವು ಗಮನಹರಿಸದ ಜಿಲ್ಲಾಡಳಿತ
ಶಿವಮೊಗ್ಗ, ಮೇ 11: ಜಿಲ್ಲೆಯ ಭದ್ರಾವತಿ ತಾಲೂಕಿನ ಆನವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಆದ್ರಿಹಳ್ಳಿ ಗ್ರಾಮದಲ್ಲಿ, ಸಾಲುಸಾಲಾಗಿ ಕಿಡ್ನಿ ವೈಫಲ್ಯದ ಸಮಸ್ಯೆಗೆ ಗ್ರಾಮಸ್ಥರು ತುತ್ತಾಗುತ್ತಿದ್ದಾರೆ. ಕಿಡ್ನಿ ವೈಫಲ್ಯದ ಕಾರಣದಿಂದಲೇ ಇತ್ತೀಚೆಗೆ ಮಹಿಳೆಯೋರ್ವರು ಅಸುನೀಗಿರುವ ಘಟನೆ ಕೂಡ ನಡೆದಿದೆ. ಲವಣಾಂಶಯುಕ್ತ ಬೋರ್‌ವೆಲ್ ನೀರು ಸೇವನೆಯೇ ಅನಾರೋಗ್ಯಕ್ಕೆ ಕಾರಣವೆಂದು ಸ್ಥಳೀಯರು ದೂರುತ್ತಿದ್ದಾರೆ. ಗ್ರಾಮದಲ್ಲಿ ಗಂಭೀರ ಸ್ವರೂಪದ ಸಮಸ್ಯೆ ತಲೆದೋರಿದ್ದರೂ ಜಿಲ್ಲಾಡಳಿತವಾಗಲಿ, ಸ್ಥಳೀಯ ತಾಲೂಕು ಆಡಳಿತವಾಗಲಿ ಇತ್ತ ಚಿತ್ತ ಹರಿಸಿಲ್ಲ. ಗ್ರಾಮಸ್ಥರು ಸೇವಿಸುತ್ತಿರುವ ಕುಡಿಯುವ ನೀರು ಸೇವನೆಗೆ ಯೋಗ್ಯವೇ ಎಂಬುವುದರ ತಪಾಸಣೆ ನಡೆಸಿಲ್ಲ. ಪರ್ಯಾಯ ಕುಡಿಯುವ ನೀರಿಗೆ ಕ್ರಮಕೈಗೊಂಡಿಲ್ಲ. ನಾಗರಿಕರ ಆರೋಗ್ಯ ತಪಾಸಣೆಗೆ ಮುಂದಾಗಿಲ್ಲ. ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದಕ್ಕೆ ಕಾರಣವೇನೆಂಬುವುದನ್ನು ಪತ್ತೆ ಹಚ್ಚಲು ಯತ್ನಿಸಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ ಗ್ರಾಮದಲ್ಲಿ ಸುಮಾರು 8 ಜನರು ಕಿಡ್ನಿ ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಲ್ಲಿ ಕೆಲ ವ್ಯಕ್ತಿಗಳ ಕಿಡ್ನಿಗಳು ವೈಫಲ್ಯಕ್ಕೀಡಾಗಿವೆ ಎಂಬ ಮಾಹಿತಿಯಿದೆ. ಕಳೆದ ಕೆಲ ದಿನಗಳ ಹಿಂದೆ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದ ಸುಮಾರು 25 ವರ್ಷ ಪ್ರಾಯದ ವಿವಾಹಿತ ಮಹಿಳೆಯೊಬ್ಬರು ಅಸುನೀಗಿರುವ ಘಟನೆ ಕೂಡ ನಡೆದಿದೆ. ಇದು ಸ್ಥಳೀಯ ನಾಗರಿಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಕ್ರಮವಿಲ್ಲ: ಈ ನಡುವೆ ಆನವೇರಿ ಜಿಪಂ ಸದಸ್ಯ ವೀರಭದ್ರಪ್ಪ ಪೂಜಾರ್‌ರವರು ಆದ್ರಿಹಳ್ಳಿ ಗ್ರಾಮಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ತದನಂತರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕೆ.ರಾಕೇಶ್‌ಕುಮಾರ್‌ರವರ ಗಮನಕ್ಕೆ ತರುವ ಕೆಲಸ ಮಾಡಿದ್ದಾರೆ.
ಬುಧವಾರ ಜಿಪಂ ಸದಸ್ಯ ವೀರಭದ್ರಪ್ಪ ಪೂಜಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಆದ್ರಿಹಳ್ಳಿ ಗ್ರಾಮದಲ್ಲಿ ಸಾಲುಸಾಲಾಗಿ ಗ್ರಾಮಸ್ಥರು ಕಿಡ್ನಿ ಸಂಬಂಧಿತ ರೋಗದಿಂದ ಬಳಲುತ್ತಿದ್ದಾರೆ. ಇದಕ್ಕೆ ಕುಡಿಯಲು ಪೂರೈಕೆ ಮಾಡುತ್ತಿರುವ ಬೋರ್‌ವೆಲ್ ನೀರು ಕಾರಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಬಳಿ ದೂರಿದ್ದಾರೆ. ಈ ಬಗ್ಗೆ ತಾವು ಸಿಇಒರವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಆದಾಗ್ಯೂ ಇಲ್ಲಿಯವರೆಗೂ ಆದ್ರಿಹಳ್ಳಿ ಗ್ರಾಮದಲ್ಲಿ ಮನೆಮಾಡಿರುವ ಸಮಸ್ಯೆ ಪರಿಹಾರವಾಗಿಲ್ಲ. ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ತಕ್ಷಣವೇ ಪ್ರಸ್ತುತ ಗ್ರಾಮಸ್ಥರಿಗೆ ಪೂರೈಕೆ ಮಾಡುತ್ತಿರುವ ನೀರು ಕುಡಿಯಲು ಯೋಗ್ಯವೇ? ಅಲ್ಲವೇ? ಎಂಬುದರ ಬಗ್ಗೆ ಪ್ರಯೋಗಶಾಲೆಯಲ್ಲಿ ಪರೀಕ್ಷೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ. ಆತಂಕ:
ಪ್ರಸ್ತುತ ಕುಡಿಯಲು ಪೂರೈಕೆ ಮಾಡಲಾಗಿತ್ತಿರುವ ಬೋರ್‌ವೆಲ್ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಲವಣಾಂಶವಿದ್ದು, ಕುಡಿಯಲು ಯೋಗ್ಯವಲ್ಲವಾಗಿದೆ. ಇದರಿಂದ ಕಿಡ್ನಿ ಸ್ಟೋನ್, ವೈಫಲ್ಯದಂತಹ ಸಮಸ್ಯೆಗಳಿಗೆ ತುತ್ತಾಗುವಂತಾಗಿದೆ ಎಂಬುದು ಆದ್ರಿಹಳ್ಳಿ ಗ್ರಾಮದ ಕೆಲ ಗ್ರಾಮಸ್ಥರ ಆರೋಪವಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ಗ್ರಾಮಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಬೇಕಾಗಿದೆ. ಪ್ರಸ್ತುತ ಪೂರೈಕೆ ಮಾಡಲಾಗುತ್ತಿರುವ ಕುಡಿಯುವ ನೀರು ಕುಡಿಯಲು ಯೋಗ್ಯವೇ? ಎಂಬುವುದನ್ನು ಪತ್ತೆ ಹಚ್ಚಬೇಕಾಗಿದೆ.
ಅಧಿಕಾರಿಗಳ ನಿರ್ಲಕ್ಷವೇಕೆ?:
=ತಮ್ಮ ಕ್ಷೇತ್ರ ವ್ಯಾಪ್ತಿಯ ಆದ್ರಿಹಳ್ಳಿ ಗ್ರಾಮದಲ್ಲಿ ಗಂಭೀರ ಸ್ವರೂಪದ ಸಮಸ್ಯೆ ತಲೆದೋರಿದೆ. ನಾಗರಿಕರು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಿಡ್ನಿ ವೈಫಲ್ಯದಿಂದ ಮಹಿಳೆಯೊಬ್ಬರು ಅಸುನೀಗಿದ್ದಾರೆ. ಆದಾಗ್ಯೂ ಇಲ್ಲಿಯವರೆಗೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿಲ್ಲ. ವಿೀರಭದ್ರಪ್ಪ ಪೂಜಾರ್, ಜಿಪಂ ಸದಸ್ಯ







