ಕಡೂರು ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಮಡಿಲಿಗೆ

ಕಡೂರು, ಮೇ 11: ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಯಗಟಿ ಕ್ಷೇತ್ರದ ಕಾಂಗ್ರೆಸ್‌ನ ರೇಣುಕಾ ಉಮೇಶ್ ಮತ್ತು ಪಿಳ್ಳೇನಹಳ್ಳಿ ಕ್ಷೇತ್ರದ ಎಚ್.ಜಿ. ರುದ್ರಸ್ವಾಮಿ ಆಯ್ಕೆಯಾದ
ಕಳೆದ ಸಲ ನಡೆದ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 14 ಸ್ಥಾನ ಒಲಿಯುವ ಮೂಲಕ ಸ್ಪಷ್ಟ ಬಹುಮತ ದೊರಕಿತು. ಬಿಜೆಪಿ 7 ಸ್ಥಾನ, ಜೆಡಿಎಸ್ 2 ಸ್ಥಾನ, ಪಕ್ಷೇತರ 1 ಸ್ಥಾನ ಗೆದ್ದು ಒಟ್ಟು 24 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾತಿ ಇದ್ದುದರಿಂದ ಬೇರೆ ಪಕ್ಷದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಲಿಲ್ಲ. ಉಪಾಧ್ಯಕ್ಷರ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದಿದ್ದು, ಈ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಪಿಳ್ಳೇನಹಳ್ಳಿ ಕ್ಷೇತ್ರದಿಂದ ಆಯ್ಕೆಗೊಂಡಿರುವ ಎಚ್. ಜಿ. ರುದ್ರಸ್ವಾಮಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಬಿಜೆಪಿಯಿಂದ ಜಿಗಣೇಹಳ್ಳಿ ಮಂಜು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆದು ಎಚ್.ಜಿ. ರುದ್ರಸ್ವಾಮಿಗೆ 15 ಮತಗಳು, ಜಿಗಣೇಹಳ್ಳಿ ಮಂಜು ಅವರಿಗೆ 7 ಮತಗಳು ಲಭಿಸಿದವು. ಹೆಚ್ಚಿನ ಮತ ಪಡೆದ ರುದ್ರಸ್ವಾಮಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ಚುನಾವಣೆ ವೇಳೆಸದಸ್ಯರಾದ ಬ್ಯಾಗಡೇಹಳ್ಳಿ ಬಸವರಾಜು ಮತ್ತು ಸರಿತಾ ಆನಂದ್ ಗೈರು ಹಾಜರಾಗಿದ್ದರು. ಚುನಾವಣಾ ಸಂದರ್ಭದಲ್ಲಿ ತಹಶೀಲ್ದಾರ್ ಭಾಗ್ಯಾ ಹಾಜರಿದ್ದರು. ತರೀಕೆರೆ ಉಪವಿಭಾಗಾಧಿಕಾರಿ ಸಂಗಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯಿತು.
ನಂತರ ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ, ಮಾಜಿ ಜಿಪಂ ಅಧ್ಯಕ್ಷ ಕೆ.ಎಂ. ಕೆಂಪರಾಜು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ವನಮಾಲಾ ದೇವರಾಜ್, ಶರತ್ ಕೃಷ್ಣಮೂರ್ತಿ, ಲೋಲಾಕ್ಷಿಬಾಯಿ, ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ. ರಾಜಪ್ಪ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಚ್. ಚಂದ್ರಪ್ಪ, ಕೆ.ಎಂ.ವಿನಾಯಕ್, ಮುಖಂಡರಾದ ಕಲ್ಮುರುಡಪ್ಪ, ಸಖರಾಯಪಟ್ಟಣ ಸತೀಶ್, ದೇವನೂರು ಬಸವರಾಜ್ ಮತ್ತಿತರಿದ್ದರು.







