ರಾಜ್ಯ ಸರಕಾರ ಹೆಚ್ಚಿನ ಅನುದಾನ ನೀಡುವಂತೆ ಮನವಿ
ಬರ ಪರಿಸ್ಥಿತಿ ನಿರ್ವಹಣೆ,
ಸೊರಬ, ಮೇ 11: ತಾಲೂಕಿನಲ್ಲಿ ಬರ ಪರಿಸ್ಥಿತಿಯಿಂದಾಗಿ ಅನೇಕ ತೊಂದರೆಗಳಾಗುತ್ತಿದ್ದು, ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ರಾಜ್ಯ ಸರಕಾರ ಹೆಚ್ಚಿನ ಅನುದಾನ ನೀಡಲು ಮುಂದಾಗಬೇಕು ಎಂದು ಶಾಸಕ ಮಧುಬಂಗಾರಪ್ಪ ಅವರು ರಾಜ್ಯ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರಲ್ಲಿ ಮನವಿ ಮಾಡಿದರು. ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕಿನ ಬರ ಹಾಗೂ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ತಾಲೂಕನ್ನು ರಾಜ್ಯ ಸರಕಾರ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಇಲ್ಲಿನ ಸುಮಾರು 1,200ಕ್ಕೂ ಅಧಿಕ ಕೆರೆಗಳು ಭತ್ತಿಹೋಗುವ ಜೊತೆಗೆ ಅಂತರ್ಜಲ ಮಟ್ಟವು ಸಹ ಕುಸಿದಿದೆ. ಕೊಳವೆ ಬಾವಿಗಳನ್ನು ನಂಬಿ ಜನತೆ ಜೀವನ ಸಾಗಿಸುವಂತಾಗಿದೆ ಎಂದರು. ನೀರಿನ ಆವಶ್ಯಕತೆ ಇರುವಲ್ಲಿ ಮಾಹಿತಿ ಸಂಗ್ರಹಿಸಿ ಹೆಚ್ಚಿನ ಕೊಳವೆ ಬಾವಿಗಳನ್ನು ಕೊರೆಸಬೇಕು, ಕಳೆದ ಜಿಪಂ ಅವಧಿಯಲ್ಲಿ ಸಾಕಷ್ಟು ಹಣದ ದುರುಪಯೋಗವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಸಮಗ್ರವಾಗಿ ಕಾರ್ಯಗಳು ನಡೆಯುತ್ತಿದ್ದು, ಹೆಚ್ಚಿನ ಅನುದಾನಗಳ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಬೆಳೆ ಪರಿಹಾರಕ್ಕೆ ತಾಲೂಕಿನಲ್ಲಿ 24ಸಾವಿರ ಫಲಾನುಭವಿಗಳಿದ್ದು, 1.84 ಕೋಟಿ ರೂ. ಬಿಡುಗಡೆಯಾಗಿದೆ. ಸುಮಾರು 6 ಸಾವಿರ ಫಲಾನುಭವಿಗಳಿಗೆ ಬೆಳೆ ಪರಿಹಾರ ನೀಡಲಾಗಿದೆ. ಆದರೆ, ಹೆಚ್ಚಿನ ಅನುದಾನದ ಕೊರತೆ ಇದ್ದು, ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಮೂಲಕ ತಾಲೂಕಿಗೆ ಬೆಳೆ ವಿಮೆ ಸೇರಿದಂತೆ ಬರ ಪರಿಹಾರಕ್ಕಾಗಿ ಅನುದಾನಗಳನ್ನು ನೀಡುವಂತೆ ರಾಜ್ಯ ಸಚಿವರನ್ನು ಒತ್ತಾಯಿಸಿದರು. ರಾಜ್ಯ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಮಾತನಾಡಿ, ತಾಲೂಕಿಗೆ ತಾವು ವಿಶೇಷ ಗಮನ ನೀಡಿದ್ದು, ತಾಲೂಕಿಗೆ ಹೆಚ್ಚಿನ ಅನುದಾನಗಳನ್ನು ನೀಡಲು ಬದ್ಧನಿದ್ದೇನೆ. ಬೆಳೆ ವಿಮೆ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುವ ಜೊತೆಗೆ ಒತ್ತನ್ನು ನೀಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಆರ್. ಪ್ರಸನ್ನಕುಮಾರ್, ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ತಾಪಂ ಅಧ್ಯಕ್ಷ ಜೈಶೀಲಪ್ಪ, ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಜಿಪಂ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ತಹಶೀಲ್ದಾರ್ ಕವಿತಾ ಯೋಗಪ್ಪನವರ್, ತಾಪಂ ಇಒ ಎಸ್.ಎಂ.ಡಿ. ಇಸ್ಮಾಯೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.





