ನ್ಯಾಯದಾನ ವಿಳಂಬಕ್ಕೆ ನ್ಯಾಯಾಧೀಶರ ಕೊರತೆಯಲ್ಲ ಅದಕ್ಷತೆ ಕಾರಣ!

ಫೆಬ್ರವರಿ 24ರಂದು ನಡೆದ ಮುಖ್ಯಮಂತ್ರಿಗಳು ಹಾಗೂ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಜಂಟಿ ಸಮಾವೇಶವು, ಕಾಟಾಚಾರಕ್ಕಷ್ಟೇ ನಡೆದಿತ್ತು. ಆದರೆ ನ್ಯಾಯಾಂಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿಬಿದ್ದಿರುವ ಬಗ್ಗೆ ಭಾರತದ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಸಮಾವೇಶದಲ್ಲಿ ತುಂಬಾ ಭಾವನಾತ್ಮಕವಾಗಿ ತಮ್ಮ ಅಳಲನ್ನು ತೋಡಿಕೊಂಡರು. ಅವರ ಪ್ರಕಾರ ಬಹಳಷ್ಟು ಸಂಖ್ಯೆಯ ಪ್ರಕರಣಗಳು ಇತ್ಯರ್ಥಗೊಳ್ಳದೆ ಉಳಿದಿರುವುದಕ್ಕೆ ನ್ಯಾಯಾಧೀಶರ ಕೊರತೆಯೇ ಪ್ರಮುಖ ಕಾರಣವಾಗಿದೆ. ನ್ಯಾಯದಾನವು ಅಸಹನೀಯವಾದ ರೀತಿಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ವಿವಿಧ ವೇದಿಕೆಗಳಲ್ಲಿ ಹಾಗೂ ಸಾರ್ವಜನಿಕ ಚರ್ಚೆಗಳಲ್ಲಿ ಈಗಾಗಲೇ ವ್ಯಾಪಕವಾಗಿ ಕಳವಳವನ್ನು ವ್ಯಕ್ತಪಡಿಸಲಾಗಿದೆ. ಆದರೆ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನ್ಯಾಯಾಂಗ ಅಥವಾ ಸರಕಾರದಿಂದ ಯಾವುದೇ ಗಂಭೀರವಾದ ಪ್ರಯತ್ನಗಳು ನಡೆದಿರುವುದು ಕಂಡುಬರುತ್ತಿಲ್ಲ.
ಆದರೆ ಭಾರೀ ಸಂಖ್ಯೆಯ ಮೊಕದ್ದಮೆಗಳು ವಿಚಾರಣೆಗೆ ಬಾಕಿಯಿರುವ ಸಮಸ್ಯೆಗಳು, ನ್ಯಾಯಾಂಗದ ಹುದ್ದೆಗಳು ಖಾಲಿ ಬಿದ್ದಿರುವ ಸಮಸ್ಯೆಯಷ್ಟೇ ಹಳೆಯದೇನೂ ಅಲ್ಲವೆಂಬುದನ್ನು ಗಮನಿಸಬೇಕು. ಹೀಗಾಗಿ ಸಿಜೆಐ ಅವರ ಅನಿಸಿಕೆಯು ಈ ಸಮಸ್ಯೆಯ ಒಂದು ಸಣ್ಣ ಅಂಶವಷ್ಟೇ ಆಗಿದೆಯೆಂದು ನಾವು ಗ್ರಹಿಸಬೇಕಾಗಿದೆ.
ಶ್ರೀಸಾಮಾನ್ಯನ ಹಿತಾಸಕ್ತಿಯ ದೃಷ್ಟಿಯಿಂದ ಮಾತ್ರವಲ್ಲ, ವಿದೇಶಗಳಿಂದ ಹೂಡಿಕೆಯನ್ನು ಆಕರ್ಷಿಸಿ, ದೇಶದ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಸಿಜೆಐ ಅವರು ಪ್ರಧಾನಿಯ ಮುಂದೆ ತನ್ನ ಈ ಅಳಲನ್ನು ತೋಡಿಕೊಂಡರೆಂಬುದು ಸ್ಪಷ್ಟವಾಗಿದೆ. ಸರಕಾರಕ್ಕೆ ತಾನಾಗಿಯೇ ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ಪಡೆದಿರುವ ಸುಪ್ರೀಂಕೋರ್ಟನ್ನು, ನಮ್ಮ ಸಂವಿಧಾನವು ದೇಶದ ಅತ್ಯಂತ ಶಕ್ತಿಶಾಲಿ ಸಂಸ್ಥೆಯನ್ನಾಗಿ ರೂಪಿಸಿದೆ.
ಸಂವಿಧಾನದ 141ನೆ ಕಲಮಿನ ಪ್ರಕಾರ ಸುಪ್ರೀಂಕೋರ್ಟ್ ಕೈಗೊಳ್ಳುವ ಯಾವುದೇ ನಿರ್ಧಾರವು, ಆ ದೇಶದ ಕಾನೂನಾಗಿರುತ್ತದೆ ಹಾಗೂ ಅದು ಎಲ್ಲರಿಗೂ ಅನ್ವಯವಾಗುತ್ತದೆ. 142ನೇ ಕಲಮು, ಯಾವುದೇ ವಿಷಯದ ಬಗೆಗೂ ಆದೇಶವನ್ನು ನೀಡುವ ಹಾಗೂ ಪ್ರಕರಣಗಳ ಇತ್ಯರ್ಥವನ್ನು ನೆನೆಗುದಿಯಲ್ಲಿಡುವ ಅಧಿಕಾರವನ್ನು ಅದಕ್ಕೆ ನೀಡಿದೆ. ಇನ್ನು ಸಂವಿಧಾನದ 144ನೇ ಕಲಮಿನಡಿ, ನ್ಯಾಯಾಂಗ ಹಾಗೂ ಸಿವಿಲ್ ಸೇರಿದಂತೆ ಎಲ್ಲಾ ಇಲಾಖೆಗಳು, ಸುಪ್ರೀಂಕೋರ್ಟ್‌ನ ನೆರವಿನೊಂದಿಗೆ ಕಾರ್ಯಾಚರಿಸಬೇಕಾಗುತ್ತದೆ.
ನ್ಯಾಯಾಧೀಶರ ಸಂಖ್ಯೆ ಕಡಿಮೆಯಿರುವುದಕ್ಕೂ, ಮೊಕದ್ದಮೆಗಳ ಇತ್ಯರ್ಥ ವಿಳಂಬವಾಗುತ್ತಿರುವುದಕ್ಕೂ ಸಂಬಂಧ ಕಲ್ಪಿಸುವುದೆಂದರೆ, ಬಿರುಗಾಳಿಯ ನಡುವೆ ದೋಣಿಯನ್ನು ನಡೆಸುವುದಕ್ಕೆ ಸಮನಾಗಿದೆ. ಮೊಕದ್ದಮೆಯ ವಿಚಾರಣೆಯನ್ನು ದೀರ್ಘ ಸಮಯದವರೆಗೆ ಎಳೆಯುವುದರಲ್ಲಿ ಭಾರತ ಕುಖ್ಯಾತವಾಗಿದೆ. ನ್ಯಾಯಾಲಯದಲ್ಲಿರುವ ಪ್ರಕರಣದ ಜೀವಿತಾವಧಿಯು, ಮಾನವನ ಜೀವಿತಾವಧಿಗಿಂತಲೂ ಅಧಿಕವಾಗಿರಬಹುದಾಗಿದೆ. ಸಿವಿಲ್ ಪ್ರಕರಣಗಳಂತೂ ಹಲವು ತಲೆಮಾರುಗಳವರೆಗೂ ಮುಂದುವರಿಯಬಲ್ಲದು.
ಗಿನ್ನೆಸ್ ವಿಶ್ವದಾಖಲೆ ಪುಸ್ತಕದ ಪ್ರಕಾರ ಭಾರತದಲ್ಲಿ ಜಗತ್ತಿನಲ್ಲೇ ಅತ್ಯಂತ ದೀರ್ಘಾವಧಿಯ ಮೊಕದ್ದಮೆಗಳನ್ನು ಭಾರತವು ಹೊಂದಿದೆ. ಪುಣೆಯಲ್ಲಿ 1966ರ ಎಪ್ರಿಲ್ 28ರಂದು ಬಾಳಾಸಾಹೇಬ್ ಪತ್ಲೋಜಿ ಥೋರಟ್ ಪರವಾಗಿ ನೀಡಲಾದ ತೀರ್ಪು ವಿಶ್ವದಲ್ಲೇ ಅತ್ಯಂತ ದೀರ್ಘಾವಧಿಯ ಮೊಕದ್ದಮೆಯೆನಿಸಿದೆ. 761 ವರ್ಷಗಳ ಹಿಂದೆ ಅಂದರೆ 1205ನೆ ಇಸವಿಯಲ್ಲಿ ಅವರ ಪೂರ್ವಜರಾದ ಮಾಲೊಜಿ ಥೋರಟ್ ಎಂಬವರು ಹೂಡಿದ ಮೊಕದ್ದಮೆಗೆ ಸಂಬಂಧಿಸಿ ನೀಡಲಾದ ತೀರ್ಪು ಅದಾಗಿತ್ತು.
1976ರಲ್ಲಿ, ಸ್ವತಃ ಸುಪ್ರೀಂಕೋರ್ಟ್ ‘ಬಾಬುರಾಮ್ ವರ್ಸಸ್ ರಘುನಾಥ್‌ಜಿ ಮಹಾರಾಜ್’ ಪ್ರಕರಣದ ವಿಚಾರಣೆಯಲ್ಲಿ ಅಸಾಮಾನ್ಯವಾದ ವಿಳಂಬವಾಗಿದ್ದ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ‘‘ಕಡೆಗಾದರೂ ಈ ಮೊಕದ್ದಮೆಯ ದುರದೃಷ್ಟಕರ ಹಾಗೂ ವೀರೋಚಿತ ಕಥಾನಕವು ಅಂತ್ಯಗೊಂಡಿದೆ. ಮೊಕದ್ದಮೆಯು ರಜತವರ್ಷವನ್ನು ಕಂಡಿದೆ... ಭಾರತೀಯ ಜನತೆ ತುಂಬಾ ಸಹನಾಶೀಲರು, ಆದರೆ ಅವರ ಅನಂತ ಸಹನೆಯ ಹೊರತಾಗಿಯೂ, ನ್ಯಾಯವನ್ನು ಪಡೆಯಲು 25 ವರ್ಷಗಳ ಕಾಲ ಕಾದು ಕುಳಿತಿರಲು ಅವರಿಗೆ ಸಾಧ್ಯವಾಗದು. ಸಹನೆಗೆ ಒಂದು ಮಿತಿಯಿದೆ. ನಮ್ಮ ಜನರನ್ನು ಆ ಮಿತಿಯಿಂದಾಚೆಗೆ ದೂಡಿದರೆ, ಅದರಿಂದ ವಿನಾಶಕಾರಿ ಪರಿಣಾಮಗಳಾಗಬಹುದು’’ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿತ್ತು.
ಆದರೆ ಈ ಸಮಸ್ಯೆಯು ಈಗ ಇನ್ನಷ್ಟು ಹದಗೆಟ್ಟಿದೆ. ಸಿವಿಲ್ ಪ್ರಕರಣಗಳು ಮಾತ್ರವಲ್ಲ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಕೂಡಾ ದಶಕಗಳವರೆಗೆ ಎಳೆಯಲ್ಪಡುತ್ತದೆ.
ನ್ಯಾಯಾಧೀರ ಸಂಖ್ಯೆ- ಜನಸಂಖ್ಯೆ ಅನುಪಾತದ ವಿಷಯದ ಬಗ್ಗೆ ಮಾತನಾಡುವುದಾದರೆ, ಅಮೆರಿಕದ ಮಾಜಿ ಅಧ್ಯಕ್ಷ ನಿಕ್ಸನ್, 1971ರ ಮಾರ್ಚ್ 11ರಂದು ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದನ್ನು ಸ್ಮರಿಸಿಕೊಳ್ಳುವುದು ಸಮಂಜಸವಾಗಿದೆ. ‘‘ಒಂದು ವೇಳೆ ನಾವು ಹೆಚ್ಚು ಸಂಖ್ಯೆಯ ನ್ಯಾಯಾಧೀಶರು, ಅಧಿಕ ಪೊಲೀಸರು ಹಾಗೂ ಅಧಿಕ ನ್ಯಾಯವಾದಿಗಳನ್ನು ಒಂದೇ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವುದಕ್ಕಷ್ಟೇ ಸೀಮಿತಗೊಳಿಸಿದಲ್ಲಿ, ಇದರಿಂದ ಇನ್ನಷ್ಟು ವಿಳಂಬ ವಿಚಾರಣೆಗಳು, ಹೆಚ್ಚು ಮೊಕದ್ದಮೆಗಳು, ಹೆಚ್ಚು ಜೈಲುಗಳು ಹಾಗೂ ಹೆಚ್ಚು ಕ್ರಿಮಿನಲ್‌ಗಳನ್ನು ನಾವು ಸೃಷ್ಟಿಸುತ್ತೇವಷ್ಟೆ. ಸಮಾನವಾದ ಹುದ್ದೆಗಳನ್ನು ಅಧಿಕ ಸಂಖ್ಯೆಯಲ್ಲಿ ಸೃಷ್ಟಿಸುವುದು ಸಮಸ್ಯೆಗೆ ಇರುವ ಉತ್ತರವಲ್ಲ. ಕಲ್ಪನೆ ಹಾಗೂ ದಿಟ್ಟತನದಿಂದ ಕೂಡಿದ, ಅನನ್ಯವಾದ ಬದಲಾವಣೆ ನಮಗೆ ಈಗ ಬೇಕಾಗಿದೆ’’ ಎಂದವರು ಹೇಳಿದ್ದರು.
ನಿವೃತ್ತ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಕೂಡಾ ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ‘‘ಸತ್ಯವೇನೆಂದರೆ, ಹೆಚ್ಚು ನ್ಯಾಯಾಲಯಗಳಿದ್ದಲ್ಲಿ ಮೊಕದ್ದಮೆಗಳ ಇತ್ಯರ್ಥವೂ ವಿಳಂಬವಾಗುತ್ತದೆ, ಕೆಲಸವಿಲ್ಲದ ನ್ಯಾಯಾಧೀಶರ ಸಂಖ್ಯೆಯೂ ಹೆಚ್ಚಾಗುತ್ತದೆ. ಉತ್ತರದಾಯಿತ್ವ ಹಾಗೂ ಪಾರದರ್ಶಕತೆಯ ಕೊರತೆಯು ಇತ್ಯರ್ಥವಾಗದೆ ಉಳಿದಿರುವ ಪ್ರಕರಣಗಳ ಸಂಖ್ಯೆಯ ಹೆಚ್ಚಳಕ್ಕೆ ನೈಜ ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯ ಪ್ರಕರಣಗಳ ಇತ್ಯರ್ಥಕ್ಕೆ ಹಾಗೂ ವೆಚ್ಚದಾಯಕವಲ್ಲದ ನ್ಯಾಯಾಂಗ ವ್ಯವಸ್ಥೆಯ ಸ್ಥಾಪನೆಗೆ ನ್ಯಾಯಾಂಗದ ಅಧಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸುವುದೇ ಶಸ್ತ್ರಕ್ರಿಯೆಯಲ್ಲ. ಅತ್ಯಂತ ಬುದ್ಧಿವಂತಿಕೆಯೊಂದಿಗೆ ನ್ಯಾಯಾಧೀಶರ ಆಯ್ಕೆ ಹಾಗೂ ಫಲಿತಾಂಶ ಕೇಂದ್ರಿತ ತಂತ್ರಜ್ಞಾನ ಹಾಗೂ ಸಂಕ್ಷಿಪ್ತ ವಿಚಾರಣಾ ಪ್ರಕ್ರಿಯೆ ಇದಕ್ಕಿರುವ ಪರಿಹಾರ ಮಾರ್ಗಗಳಾಗಿವೆ’’ ಎಂದವರು ಹೇಳಿದ್ದಾರೆ.
ದುರದೃಷ್ಟವಶಾತ್ ನ್ಯಾಯಮೂರ್ತಿ ಠಾಕೂರ್ ಕೂಡಾ ಏಕತಾನತೆಯಿಂದ ಕೂಡಿದ ಪ್ರಶ್ನೆಯೊಂದನ್ನು ಕೇಳುವ ಮೂಲಕ ಲೆಕ್ಕಾಚಾರದ ಭ್ರಮೆಯನ್ನು ಸೃಷ್ಟಿಸುತ್ತಿದ್ದಾರೆ. ಒಂದು ವೇಳೆ 5 ಕಾರ್ಮಿಕರಿಗೆ ರಸ್ತೆ ನಿರ್ಮಿಸಲು 10 ದಿನಗಳು ಬೇಕಾದರೆ, ಒಂದೇ ದಿನದಲ್ಲಿ ರಸ್ತೆ ನಿರ್ಮಾಣಕ್ಕೆ ಎಷ್ಟು ಕಾರ್ಮಿಕರು ಬೇಕಾಗುತ್ತಾರೆ ? ಎಂದವರು ಸಮಾವೇಶದಲ್ಲಿ ಪ್ರಶ್ನಿಸಿದ್ದರು. ಹಾಗೆಯೇ 50 ಕಾರ್ಮಿಕರು ಬೇಕಾಗುವುದೆಂದು ಉತ್ತರವನ್ನು ಕೂಡಾ ಅವರೇ ನೀಡಿದರು. ಆದರೆ ನ್ಯಾಯಾಧೀಶರೊಬ್ಬರ ಕಾರ್ಯನಿರ್ವಹಣೆಯನ್ನು ಕಾರ್ಮಿಕನ ಕೆಲಸದೊಂದಿಗೆ ಹೋಲಿಸಲು ಸಾಧ್ಯವಿಲ್ಲ.
ಒಡೆದ ಸುಳ್ಳಿನ ಗುಳ್ಳೆ
ನ್ಯಾಯಾಧೀಶರು ಕಾರ್ಯದೊತ್ತಡದಿಂದ ಬಳಲುತ್ತಿದ್ದಾರೆ ಹಾಗೂ ದೇಶದ ಇಡೀ ನ್ಯಾಯಾಂಗ ವ್ಯವಸ್ಥೆಯೆ ಕೆಲಸದ ಹೊರೆಯಿಂದಾಗಿ ತೆವಳುತ್ತಾ ಸಾಗುತ್ತಿದೆಯೆಂಬ ತಪ್ಪು ಕಲ್ಪನೆಯನ್ನು ಸೃಷ್ಟಿಸಲಾಗುತ್ತಿದೆ.
ಈ ಮಿಥ್ಯೆಯನ್ನು ಭೇದಿಸಲು ಅಧೀನ ನ್ಯಾಯಾಲಯಗಳು ಹಾಗೂ ಉನ್ನತ ನ್ಯಾಯಾಲಯಗಳಿಗೆ ಭೇಟಿ ನೀಡಿದರೆ ಸಾಕಾಗುತ್ತದೆ. ಸಾಮಾನ್ಯವಾಗಿ ನ್ಯಾಯಾಧೀಶರು ಮಧ್ಯಾಹ್ನಕ್ಕಿಂತ ಮೊದಲು ಆಗಮಿಸುವುದು ತೀರಾ ಅಪರೂಪ. ಸಾಮಾನ್ಯವಾಗಿ 12 ಗಂಟೆಯ ಹೊತ್ತಿಗೆ ಬಂದರೆ, ಮಧ್ಯಾಹ್ನ 1 ಗಂಟೆ ಅಥವಾ 1:30ರ ನಡುವೆ ಊಟಕ್ಕೆಂದು ಪೀಠದಿಂದ ಏಳುತ್ತಾರೆ. ಆನಂತರ ಕೂಡಾ ಅವರು ಅಷ್ಟೇ ಅವಧಿಯವರೆಗೆ ಕಾರ್ಯನಿರ್ವಹಿಸುತ್ತಾರೆ. ಗ್ರಾಹಕ ನ್ಯಾಯಾಲಯಗಳಂತೂ ಮಧ್ಯಾಹ್ನದ ಬಳಿಕ ಬೈಠಕ್ ನಡೆಸುವುದು ತೀರಾ ಕಡಿಮೆ.
ಅದಕ್ಷತೆ ಹಾಗೂ ಬದ್ಧತೆಯ ಕೊರತೆಯು ನ್ಯಾಯದಾನ ವಿಳಂಬಕ್ಕೆ ಮುಖ್ಯ ಕಾರಣಗಳಾಗಿವೆ. ದೀರ್ಘಸಮಯದವರೆಗೆ ತೀರ್ಪುಗಳನ್ನು ಕಾದಿರಿಸುವ ಪ್ರವೃತ್ತಿಯಲ್ಲಿ ಈ ಅದಕ್ಷತೆಯು ಸ್ಪಷ್ಟವಾಗಿ ಗೋಚರಿಸುತ್ತದೆ.
‘ಅನಿಲ್ ರಾಯ್ ವರ್ಸಸ್ ಬಿಹಾರ ಸರಕಾರ’ ಪ್ರಕರಣವನ್ನು ಇತ್ಯರ್ಥಗೊಳಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆಯೂ ಸುಪ್ರೀಂಕೋರ್ಟ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ‘‘ಅಸಮರ್ಪಕ ಸಂಖ್ಯೆಯ ನ್ಯಾಯಾಧೀಶರು, ಮೂಲಸೌಕರ್ಯದ ಕೊರತೆ, ನ್ಯಾಯವಾದಿಗಳ ಮುಷ್ಕರ ಹಾಗೂ ಆಯಾ ರಾಜ್ಯದಲ್ಲಿನ ಪರಿಸ್ಥಿತಿ ಇತ್ಯಾದಿ ಕಾರಣಗಳಿಂದಲೂ ಮೊಕದ್ದಮೆಗಳ ಇತ್ಯರ್ಥಪಡಿಸುವಿಕೆ ವಿಳಂಬವಾಗುತ್ತಿದೆ. ಆದರೆ ಒಮ್ಮೆ ನ್ಯಾಯದಾನ ವ್ಯವಸ್ಥೆಯ ಪಾಲ್ಗೊಳ್ಳುವಿಕೆಯ ಸಮಗ್ರ ಪ್ರಕ್ರಿಯೆ ಪೂರ್ಣಗೊಂಡಲ್ಲಿ, ಮುಂದೆ ಉಳಿದಿರುವುದು ತೀರ್ಪು ಘೋಷಣೆಯಷ್ಟೇ ಆಗಿರುತ್ತದೆ. ಆಗ ನ್ಯಾಯ ಪಡೆಯುವ ಕಕ್ಷಿದಾರರ ಹಕ್ಕುಗಳನ್ನು ವಿಳಂಬಿಸುವುದಕ್ಕೆ ಯಾವುದೇ ಕಾರಣವನ್ನು ನೀಡಲು ಸಾಧ್ಯವಿಲ್ಲ’’ ಎಂದು ಸುಪ್ರೀಂಕೋರ್ಟ್ ಖಾರವಾಗಿ ಹೇಳಿತ್ತು. ವಿಚಾರಣೆ ಮುಂದೂಡಿಕೆಯು, ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಅತ್ಯಂತ ಕೆಟ್ಟ ಪಿಡುಗಾಗಿದೆ. ವಕೀಲರುಗಳು ವಿಚಾರಣೆ ಮುಂದೂಡಿಕೆ ಕೋರಿ ಪದೇ ಪದೇ ನ್ಯಾಯಾಲಯಕ್ಕೆ ಮನವಿ ಸಲ್ಲಿಸುತ್ತಾರೆ. ಅಶ್ಚರ್ಯಕರವೆಂದರೆ, ನ್ಯಾಯಾಲಯಗಳು ಕೂಡಾ ವಿಚಾರಣೆ ಮುಂದೂಡಿಕೆಗೆ ಸಮ್ಮತಿಸುತ್ತವೆ. ಯಾಕೆಂದರೆ ಅನೇಕ ನ್ಯಾಯಾಧೀಶರುಗಳು, ಕೋರ್ಟ್‌ಗೆ ಪೂರ್ವಸಿದ್ಧತೆಯಿಲ್ಲದೆ ಬರುತ್ತಾರೆ. ಕಕ್ಷಿದಾರರ ಪೈಕಿ ಒಂದು ಪಕ್ಷವು, ವಿಚಾರಣೆ ಮುಂದೂಡುವುದಕ್ಕೆ ತೀವ್ರ ಆಸಕ್ತಿ ಹೊಂದಿರುತ್ತದೆ ಮತ್ತು ನ್ಯಾಯವಾದಿಗಳು ಕೂಡಾ ಅನುಚಿತವಾದ ತಂತ್ರಗಾರಿಕೆಗಳನ್ನು ಅನುಸರಿಸುವ ಮೂಲಕ ವಿಚಾರಣೆ ಮುಂದೂಡುವಂತೆ ಮಾಡುತ್ತಾರೆ. ಇದರಿಂದಾಗಿ ಪ್ರಕರಣವು ಯಾವಾಗ ಆಲಿಕೆಗೆ ಬರಲಿದೆ ಹಾಗೂ ಇತ್ಯರ್ಥಗೊಳ್ಳಲಿದೆಯೆಂಬುದು ಯಾರಿಗೂ ತಿಳಿಯದಂತಹ ಅನಿಶ್ಚಿತ ಪರಿಸ್ಥಿತಿಯು ಸೃಷ್ಟಿಯಾಗುತ್ತದೆ.
ಕೃಪೆ: ಡೆಕ್ಕನ್ ಹೆರಾಲ್ಡ್







