ನನಗೆ ಯಾರ ಮೇಲೂ ನಂಬಿಕೆಯಿಲ್ಲ: ದ್ಯುತಿ ಚಂದ್

ಹೊಸದಿಲ್ಲಿ,ಮೇ 11: ‘‘ನನಗೆ ಯಾರ ಮೇಲೂ ನಂಬಿಕೆಯಿಲ್ಲ. ನನ್ನನ್ನು ಮತ್ತೊಮ್ಮೆ ವಿವಾದಕ್ಕೆ ತಳುಕು ಹಾಕುತ್ತಾರೋ ಎಂಬ ಭಯ ಕಾಡುತ್ತಿದೆ.ನನಗೆ ಯಾರೂ ಸ್ನೇಹಿತರೇ ಇಲ್ಲ. ಪಟಿಯಾಲದ ಎನ್‌ಐಎಸ್ ಶಿಬಿರದಲ್ಲಿ ಅಭ್ಯಾಸ ನಡೆಸದೇ ಹೈದರಾಬಾದ್‌ನ ಸಾಯ್ ಶಿಬಿರದಲ್ಲಿ ಒಬ್ಬಳೇ ಅಭ್ಯಾಸ ನಡೆಸುತ್ತಿರುವೆ. 4-400ಮೀ. ರಿಲೇ ತಂಡದ ಸದಸ್ಯೆಯರಿಗೆ ನಾನೆಂದರೆ ಇಷ್ಟವಿಲ್ಲ. ನನಗೆ ಎಂ.ಆರ್. ಪೂವಮ್ಮರೊಂದಿಗೆ ಮಾತ್ರ ಒಡನಾಟವಿದೆ’’ ಎಂದು ಭಾರತದ ಓಟಗಾರ್ತಿ ದ್ಯುತಿ ಚಂದ್ ನೋವು ತೋಡಿಕೊಂಡಿದ್ದಾರೆ.
2014ರಲ್ಲಿ ‘ಲಿಂಗ ಪರೀಕ್ಷೆ’ಗೆ ಸಂಬಂಧಿಸಿ ವಿವಾದಕ್ಕೆ ಸಿಲುಕಿದ್ದ ದ್ಯುತಿ ಚಂದ್ ಅನಿರ್ದಿಷ್ಟಾವಧಿಗೆ ನಿಷೇಧವನ್ನು ಎದುರಿಸಿದ್ದರು. ಕಾಮನ್‌ಏಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಬೇಕೆಂಬ ಅವರ ಕನಸು ಭಗ್ನವಾಗಿತ್ತು. ಸ್ವಿಟ್ಝರ್‌ಲೆಂಡ್‌ನ ಕ್ರೀಡಾ ಪಂಚಾಯತಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ ದುತಿ ಕಾನೂನು ಹೋರಾಟ ನಡೆಸಿದ್ದರು. ದ್ಯುತಿಯ ಮೇಲ್ಮನವಿ ಎತ್ತಿಹಿಡಿದಿದ್ದ ನ್ಯಾಯಾಲಯ ಕಳೆದ ವರ್ಷ ದುತಿ ಮತ್ತೊಮ್ಮೆ ಕ್ರೀಡೆಗೆ ಮರಳಲು ಅವಕಾಶ ಕಲ್ಪಿಸಿತ್ತು.





