ಭಾರತ ಅಮೆರಿಕದ ವಿರುದ್ಧ 16 ಪ್ರಕರಣ ದಾಖಲಿಸಲಿದೆ: ನಿರ್ಮಲಾ ಸೀತಾರಾಮನ್
ಡಬ್ಲುಟಿಒ ಒಪ್ಪಂದ ಉಲ್ಲಂಘನೆ
ಹೊಸದಿಲ್ಲಿ, ಮೇ 11: ವಿಶ್ವ ವ್ಯಾಪಾರ ಸಂಘಟನೆ (ಡಬ್ಲುಟಿಒ) ಒಪ್ಪಂದಗಳ ಉಲ್ಲಂಘನೆಗಾಗಿ ಭಾರತವು ಅಮೆರಿಕದ ವಿರುದ್ಧ 16 ಪ್ರಕರಣಗಳನ್ನು ದಾಖಲಿಸಲಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಅಮೆರಿಕದ ಕೆಲವು ಕಾರ್ಯಕ್ರಮಗಳು ಜಾಗತಿಕ ನಿಯಮಗಳಿಗೆ ಅನುಗುಣವಾಗಿಲ್ಲವೆಂದು ಸಂಸತ್ತಿಗೆ ಬುಧವಾರ ಮಾಹಿತಿ ನೀಡಲಾಗಿದೆ.
ರಾಜ್ಯಸಭೆಯಲ್ಲಿ ಈ ಕುರಿತು ಕೇಳಿದ ಪ್ರಶ್ನೆಗೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್ ಧನಾತ್ಮಕವಾಗಿ ಉತ್ತರಿಸಿದರು.
ಅಮೆರಿಕದ ಕೆಲವು ನವೀಕರಿಸಬಹುದಾದ ಇಂಧನ ಕಾರ್ಯಕ್ರಮಗಳು ಉಪ-ಒಕ್ಕೂಟ ಮಟ್ಟದಲ್ಲಿ ಡಬ್ಲುಟಿಒ ಪ್ರಸ್ತಾವಗಳಿಗೆ ಅನುಗುಣವಾಗಿಲ್ಲ. ಮುಖ್ಯವಾಗಿ ಸಬ್ಸಿಡಿಗಳು ಹಾಗೂ ಸರಿದೂಗಿಸುವ ಕ್ರಮಗಳು ಅಥವಾ ಟ್ರಿಮ್ಸ್ (ವ್ಯಾಪಾರ ಸಂಬಂಧಿ ಹೂಡಿಕೆ ಕ್ರಮಗಳು) ಒಪ್ಪಂದದ ಮೇಲಿನ 1994ರ ಗ್ಯಾಟ್ (ಸುಂಕ ಹಾಗೂ ವ್ಯಾಪಾರದ ಬಗ್ಗೆ ಸಾಮಾನ್ಯ ಒಪ್ಪಂದ) ಅನ್ವಯದ ಕಡ್ಡಾಯಕ್ಕೆ ಸಂಬಂಧಿಸಿದಂತೆ ಇದು ನಿಯಮಗಳ ಉಲ್ಲಂಘನೆಯಾಗಿದೆಯೆಂದು ಅವರು ತಿಳಿಸಿದರು.
ವ್ಯಾಜ್ಯ ತೀರ್ಮಾನ ಸಮಿತಿಯ ಕಂಡುಕೊಂಡಿರುವ ಅಂಶಗಳು ಹಾಗೂ ಶಿಫಾರಸುಗಳ ಆಧಾರದಲ್ಲಿ ಭಾರತವು ಡಬ್ಲುಟಿಒ ಮೇಲ್ಮನವಿ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಿದೆಯೆಂದು ನಿರ್ಮಲಾ ಪ್ರತ್ಯೇಕ ಉತ್ತರವೊಂದರಲ್ಲಿ ಹೇಳಿದರು.





