ಸಂಸದೀಯ ಸಮಿತಿಗಳಿಂದ ಕಡಿಮೆ ಅಂಕ
ಬಿಜೆಪಿಗೆ ತಲೆನೋವು
ಹೊಸದಿಲ್ಲಿ, ಮೇ 11: ಸಂಸತ್ತಿನ ಉಭಯ ಸದನಗಳಲ್ಲೂ ಕಲಾಪ ನಡೆಯಗೊಡದಿರಲು ಶಪಥ ಕೊಟ್ಟಂತಿರುವ ವಿಪಕ್ಷೀಯರಿಗೆ ತಿರುಗೇಟು ನೀಡುವ ಕೆಲಸವೇ ಕೈತುಂಬಾ ಇರುವ ಸಮಯದಲ್ಲಿ ಆಳುವ ಬಿಜೆಪಿಗೀಗ ಹೊಸ ಚಿಂತೆಯೊಂದು ಎದುರಾಗಿದೆ. ಸರಕಾರದ ಕಾರ್ಯವೈಖರಿಯ ಕುರಿತು ಸಂಸದೀಯ ಸಮಿತಿಗಳು ಸರಣಿಯಾಗಿ ಪ್ರತಿಕೂಲ ಟೀಕೆ ಮಾಡುತ್ತಿದೆ ಹಾಗೂ ಈ ಸಮಿತಿಗಳಲ್ಲಿ ಬಿಜೆಪಿ ಸಂಸದರ ಭಾಗವಹಿಸುವಿಕೆಯ ಕುರಿತಾಗಿಯೂ ಅವು ಅಸಂತೋಷ ವ್ಯಕ್ತಪಡಿಸಿದೆ.
ಸಂಸದೀಯ ಸಮಿತಿಯಿಂದ ಇತ್ತೀಚೆಗೆ ತರಾಟೆಗೆತ್ತಿಕೊಳ್ಳಲ್ಪಟ್ಟಿರುವುದು ಪರಿಸರ ಸಚಿವಾಲಯ ಹಾಗೂ ಅದರ ಮಾಲಿನ್ಯ ಕಾವಲು ನಾಯಿಗಿರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ. ಅದು ಮಾಲಿನ್ಯ ನಿಯಂತ್ರಣದಲ್ಲಿ ಕಳಪೆ ಸಾಧನೆ ತೋರಿಸಿವೆ ಹಾಗೂ ವಾಯು, ನೀರು ಹಾಗೂ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಮೂಲಸೌಲಕರ್ಯ ರಚಿಸಲು ವಿಫಲವಾಗಿವೆಯೆಂದು ಸಮಿತಿಯು ಕಿಡಿಕಾರಿದೆ.
ವಿಜ್ಞಾನ, ತಂತ್ರಜ್ಞಾನ, ಪರಿಸರ ಮಾಲಿನ್ಯ ಅರಣ್ಯ ಸಂಸದೀಯ ಸ್ಥಾಯಿ ಸಮಿತಿಯು ಮಾಲಿನ್ಯ ನಿಯಂತ್ರಣಕ್ಕೆ ಮೀಸಲಿರಿಸಿರುವ ನಿಧಿಯನ್ನು ಬಳಸಿಕೊಳ್ಳಲು ಪರಿಸರ ಸಚಿವಾಲಯ ವಿಫಲವಾಗಿದೆಯೆಂದು ಆರೋಪಿಸಿದೆ. ಅಲ್ಲದೆ, ಆಳುವ ಬಿಜೆಪಿಯ ಸಂಸದರು, ಈ ಸಂಸದೀಯ ಸಮಿತಿಗಳ ಕಲಾಪದಿಂದ ದೂರವುಳಿಯುತ್ತಿದ್ದಾರೆಂದು ಮಂಗಳವಾರ ನಡೆದ ಉಭಯ ಸದನಗಳ ಬಿಜೆಪಿ ಸಂಸದನ ಸಭೆಯೊಂದರಲ್ಲಿ ಸಂಸದೀಯ ವ್ಯವಹಾರ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಪ್ರತಿಕೂಲ ಟೀಕೆ ಅಥವಾ ಶಿಫಾರಸುಗಳ ವರದಿಗಳು ಕಳವಳಕ್ಕೆ ಕಾರಣವಾಗಿವೆಯೆಂದು ಎಚ್ಚರಿಸಿದ ಅವರು, ಮಿನಿ ಸಂಸತ್ತುಗಳೆಂದು ಕರೆಯಲ್ಪಡುವ ಹಾಗೂ ಸರಕಾರ ವಿವಿಧ ಇಲಾಖೆಗಳ ಕೆಲಸಗಳು, ನೀತಿಗಳು ಹಾಗೂ ಕಾನೂನುಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುವ ಸಂಸದೀಯ ಸಮಿತಿಗಳ ಸಭೆಗಳಲ್ಲಿ ಭಾಗವಹಿಸುವಿಕೆಯನ್ನು ಸುಧಾರಿಸುವಂತೆಯೂ ಸಂಸದರಿಗೆ ಸೂಚಿಸಿದರು.
ಸಭೆಯಲ್ಲಿ ನಾಯ್ಡು ಈ ವಿಷಯ ಪ್ರಸ್ತಾಪಿಸಿದಾಗ ಪ್ರಧಾನಿ ನರೇಂದ್ರ ಮೋದಿ ಸಹ ಅಲ್ಲಿದ್ದರು. ಅವರು, ಸಂಸದೀಯ ಸಮಿತಿಗಳ ಸಭೆಗಳಲ್ಲಿ ಭಾಗವಹಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ವಿವಿಧ ಪಕ್ಷಗಳ ಸಂಸದರನ್ನೊಳಗೊಂಡ ಸಂಸದೀಯ ಸಮಿತಿಗಳಲ್ಲಿ ಭಾಗವಹಿಸಿದ 12 ಮಂದಿ ಸಂಸದರನ್ನು ವರದಿಯೊಂದರ ಆಧಾರದಲ್ಲಿ ಸಮಿತಿಗಳಿಂದ ಕೈಬಿಟ್ಟಿತ್ತು. ಅವರಲ್ಲಿ ವಿನೋದ್ ಖನ್ನಾ, ಕೀರ್ತಿ ಆಝಾದ್, ಓಂ ಬಿರ್ಲಾ, ದುಶ್ಯಂತ ಸಿಂಗ್ ಹಾಗೂ ವರುಣ್ ಗಾಂಧಿ ಪ್ರಮುಖರಾಗಿದ್ದರು.
ಕೆಲವು ತಿಂಗಳ ಹಿಂದೆ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯ ದಿಲ್ಲಿ ಪೋಲೀಸ್‌ಗೆ ನಿಧಿ ಕಡಿತಗೊಳಿಸಿದಕ್ಕಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಹುದ್ದೆ ತೆರವಿರುವ ವಿಚಾರದಲ್ಲಿ ಸಂಸ್ಕೃತಿ ಸಚಿವಾಲಯ ಹಾಗೂ ರೈಲುಗಳ ಸಂಚಾರದ ವಿಚಾರದಲ್ಲಿ ರೈಲ್ವೆ ಸಚಿವಾಲಯವನ್ನು ಸಂಬಂಧಿತ ಸಮಿತಿಗಳು ಟೀಕಿಸಿದ್ದವು.
ಆರೋಗ್ಯ ಹಾಗೂ ರಾಸಾಯನಿಕ ಸಚಿವಾಲಯಗಳು ಸಮಿತಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಇತರ ಇಲಾಖೆಗಳಾಗಿದ್ದವು.







