ಉತ್ತರಾಖಂಡದಲ್ಲಿ ಮತ್ತೆ ಕೈಗೆ ಚುಕ್ಕಾಣಿ

ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲು ಕೇಂದ್ರ ಶಿಫಾರಸು
♦ ಕಾಂಗ್ರೆಸ್‌ಗೆ 33 ಮತಗಳ ಸ್ಪಷ್ಟ ಬಹುಮತ ♦ ಬಿಜೆಪಿಗೆ ಭಾರೀ ಮುಖಭಂಗ ♦ ಹರೀಶ್ ರಾವತ್ ಮತ್ತೆ ಮುಖ್ಯಮಂತ್ರಿ ಗದ್ದುಗೆಗೆ ♦ ಸುಪ್ರೀಂನಿಂದ ಬಲಾಬಲ ಪರೀಕ್ಷೆಯ ಫಲಿತಾಂಶ ಪ್ರಕಟ
ಹೊಸದಿಲ್ಲಿ,ಮೇ 11: ಉತ್ತರಾಖಂಡ ವಿಧಾನಸಭೆಯಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಹರೀಶ್ ರಾವತ್ ಅವರ ಗೆಲುವಿಗೆ ಸುಪ್ರೀಂಕೋರ್ಟ್ ಬುಧವಾರ ತನ್ನ ಅಂಗೀಕಾರದ ಮುದ್ರೆಯನ್ನು ಒತ್ತಿದೆ. ಇದಾದ ಬೆನ್ನಲ್ಲೇ ಕೇಂದ್ರ ಸಂಪುಟವು ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹಿಂಪಡೆಯಲುಶಿಫಾರಸು ಮಾಡಿದ್ದು, ಹರೀಶ್‌ರಾವತ್ ನೇತೃತ್ವದ ಕಾಂಗ್ರೆಸ್ ಸರಕಾರದ ಮರುಸ್ಥಾಪನೆಗೆ ಸಮ್ಮತಿಯನ್ನು ನೀಡಿದೆ. ಇದರೊಂದಿಗೆ ಉತ್ತರಾಖಂಡದಲ್ಲಿ ಕಾಂಗ್ರೆಸ್ ಸರಕಾರದ ಪತನಕ್ಕೆ ಶತಗತಾಯ ಯತ್ನಿಸಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಆರು ವಾರಗಳ ಹಿಂದೆ ಉತ್ತರಾಖಂಡದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಕೇಂದ್ರ ಸರಕಾರವು ಹಿಂದೆಗೆದುಕೊಳ್ಳುವುದಾಗಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ವಿಧಾನಸಭೆಯಲ್ಲಿ ರಾವತ್‌ತನ್ನ ಬಹುಮತವನ್ನು ಸಾಬೀತುಪಡಿಸುವಲ್ಲಿ ಸಫಲರಾಗಿದ್ದಾರೆಂದು ಅಟಾರ್ನಿ ಜನರಲ್ ನ್ಯಾಯಾಲಯದಲ್ಲಿ ಒಪ್ಪಿಕೊಂಡರು. ‘‘ರಾವತ್ ಸದನದಲ್ಲಿ ಬಹುಮತವನ್ನು ಸಾಬೀತುಪಡಿಸಿರುವುದು ವರದಿಗಳಿಂದ ಸ್ಪಷ್ಟವಾಗಿದೆ. ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಲಾಗುವುದೆಂದು ಸರಕಾರವು ನನಗೆ ಸೂಚನೆ ನೀಡಿದೆ’’ ಎಂದು ಅವರು ಹೇಳಿದರು.ರಾಷ್ಟ್ರಪತಿ ಆಳ್ವಿಕೆ ರದ್ದುಗೊಂಡ ಕೂಡಲೇ ರಾವತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಬೇಕೆಂದು ನ್ಯಾಯಪೀಠ ತಿಳಿಸಿತು.ಆದರೆ ಅವರು ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಬೇಕೆಂದು ಆದೇಶಿಸಿತು.
ಸುಪ್ರೀಂಕೋರ್ಟ್ ಇಂದು ವಿಶ್ವಾಸಮತ ಯಾಚನೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. 71 ಶಾಸಕ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ನಿನ್ನೆ ನಡೆದ ವಿಶ್ವಾಸಮತ ಯಾಚನೆಯಲ್ಲಿ ಮತದಾನದಲ್ಲಿ ಪಾಲ್ಗೊಂಡ 61 ಶಾಸಕರ ಪೈಕಿ ರಾವತ್‌ಗೆ 33 ಶಾಸಕರ ಬೆಂಬಲ ದೊರೆತಿದ್ದು, ಸ್ಪಷ್ಟ ಬಹುಮತ ಲಭ್ಯವಾಗಿದೆ. 28 ಮಂದಿ ಶಾಸಕರು ರಾವತ್ ವಿರುದ್ಧ ಮತ ಚಲಾಯಿಸಿದ್ದರು. 9 ಮಂದಿ ಬಂಡುಕೋರ ಶಾಸಕರನ್ನು ಮತದಾನದಿಂದ ದೂರವಿರಿಸಲಾಗಿತ್ತು.
ಉತ್ತರಾಖಂಡ ವಿಧಾನಸಭೆಯ 9 ಮಂದಿ ಕಾಂಗ್ರೆಸ್ ಶಾಸಕರು ರಾವತ್ ಸರಕಾರದ ವಿರುದ್ಧ ಬಂಡೆದ್ದ ಬಳಿಕ ರಾವತ್ ಅವರು ಬಹುಮತಕಳೆದುಕೊಂಡಿದ್ದಾರೆಂದು ಹೇಳಿ, ಕೇಂದ್ರ ಸರಕಾರವು ಮಾರ್ಚ್ 27ರಂದು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತ್ತು. ನಿನ್ನೆ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತಯಾಚನೆಯ ಮತದಾನದ ವಿವರಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿತ್ತು.
ಈ ವಾರದ ಆರಂಭದಲ್ಲಿ ಸುಪ್ರೀಂಕೋರ್ಟ್, 9 ಮಂದಿ ಬಂಡುಕೋರ ಕಾಂಗ್ರೆಸ್ ಶಾಸಕರ ಅನರ್ಹತೆಯನ್ನು ಎತ್ತಿಹಿಡಿದು,ಅವರು ಸದನ ಬಲಾಬಲ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತಿಲ್ಲವೆಂದು ಆದೇಶ ನೀಡಿದಾಗಲೇ, ಬಿಜೆಪಿಗೆ ಹಿನ್ನಡೆಯುಂಟಾಗಿತ್ತು.
ಹೊಸ ಅಧ್ಯಾಯ ಆರಂಭಿಸೋಣ: ರಾವತ್
ಹೊಸದಿಲ್ಲಿ, ಮೇ 11: ನಿನ್ನೆ ನಡೆದ ವಿಶ್ವಾಸಮತ ಯಾಚನೆಯಲ್ಲಿ ಹರೀಶ್ ರಾವತ್ ಗೆದ್ದಿರುವುದನ್ನು ಕೇಂದ್ರ ಸರಕಾರವು ಒಪ್ಪಿಕೊಳ್ಳುವುದರೊಂದಿಗೆ ಕಾಂಗ್ರೆಸ್ ಉತ್ತರಾಖಂಡದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲು ಸಜ್ಜಾಗಿದೆ. ಈ ಮಧ್ಯೆ ಹರೀಶ್ ರಾವತ್ ಸುದ್ದಿಗಾರರ ಜೊತೆ ಮಾತನಾಡುತ್ತಾ, ವಿಶ್ವಾಸಮತ ಯಾಚನೆಯಲ್ಲಿ ತನ್ನ ಸರಕಾರದ ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು. ‘‘ಹಿಂದಿನದ್ದನ್ನೆಲ್ಲಾ ಮರೆಯೋಣ ಹಾಗೂ ಹೊಸ ಅಧ್ಯಾಯವನ್ನು ಆರಂಭಿಸೋಣ’’ ಎಂದವರು ಹೇಳಿದ್ದಾರೆ. ಸದನ ಬಲಾಬಲ ಪರೀಕ್ಷೆಯಲ್ಲಿ ರಾವತ್ ಅವರ ವಿಜಯವು ಪ್ರಜಾಪ್ರಭುತ್ವದ ಗೆಲುವಾಗಿದೆಯೆಂದು ಕಾಂಗ್ರೆಸ್ ಪಕ್ಷ ಹರ್ಷ ವ್ಯಕ್ತಪಡಿಸಿದೆ. ‘‘ಉತ್ತರಾಖಂಡ ಘಟನೆಯಿಂದ ಮೋದಿಜಿಯವರು ಪಾಠ ಕಲಿಯುವರೆಂದು ನಾನು ಆಶಿಸುತ್ತೇನೆ. ಈ ದೇಶದ ಜನತೆ ಹಾಗೂ ನಮ್ಮ ರಾಷ್ಟ್ರದ ಸ್ಥಾಪಕರು ನಿರ್ಮಿಸಿದ ಸಂಸ್ಥೆಗಳು ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಸಹಿಸಲಾರರು ಎಂದು ರಾಹುಲ್ ಗಾಂಧಿ’’ ಟ್ವೀಟಿಸಿದ್ದಾರೆ. ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರಕಾರವನ್ನು ಕಿತ್ತೊಗೆಯಲು ಬಿಜೆಪಿಯು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂದು ಪ್ರತಿಪಕ್ಷಗಳು ಆಪಾದಿಸಿವೆ.
ಮೋದಿಗೆ ಪಾಠ
ಉತ್ತರಾಖಂಡ ಘಟನೆಯಿಂದ ಮೋದೀಜಿ ಪಾಠ ಕಲಿಯುವರೆಂದು ನಾನು ಆಶಿಸುತ್ತೇನೆ. ದೇಶದ ಜನತೆ ಹಾಗೂ ನಮ್ಮ ರಾಷ್ಟ್ರದ ನಿರ್ಮಾತೃಗಳು ಸ್ಥಾಪಿಸಿದ ಸಂಸ್ಥೆಗಳು ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಸಹಿಸಲಾರರು.
ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ







