ಕಾಲ್ ಡ್ರಾಪ್‌ಗೆ ಪರಿಹಾರ ಅನಗತ್ಯ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಮೇ 11: ದೂರ ಸಂಪರ್ಕ ನಿರ್ವಾಹಕರು ಕಾಲ್ ಡ್ರಾಪ್‌ಗಾಗಿ ಬಳಕೆದಾರರಿಗೆ ಪರಿಹಾರ ನೀಡುವ ಅಗತ್ಯವಿಲ್ಲವೆಂದು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ. 2015ರ ಟ್ರಾಯ್ ಆದೇಶವು ‘ಏಕ ಪಕ್ಷೀಯ, ನ್ಯಾಯೋಚಿತವಲ್ಲದುದು ಹಾಗೂ ಅಪಾರ ದರ್ಶಕ’ವೆಂದು ಅದು ಹೇಳಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್), ಪ್ರತಿದಿನ ಮೊದಲ 3 ಕಾಲ್ ಡ್ರಾಪ್‌ಗಳಿಗೆ ತಲಾ ರೂ.1ರಂತೆ ಗ್ರಾಹಕರಿಗೆ ಪರಿಹಾರ ನೀಡಬೇಕೆಂದು ಸೇವಾ ಪೂರೈಕೆದಾರರಿಗೆ ಆದೇಶಿಸಿತ್ತು.
ದಿಲ್ಲಿ ಹೈಕೋರ್ಟ್ ಫೆಬ್ರವರಿಯಲ್ಲಿ ಈ ಆದೇಶವನ್ನು ರದ್ದುಗೊಳಿಸಲು ನಿರಾಕರಿಸದ ಬಳಿಕ ದೂರ ಸಂಪರ್ಕ ನಿರ್ವಾಹಕರು ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನ ಮೊರೆ ಹೊಕ್ಕಿದರು.
ಟ್ರಾಯ್‌ಯ ನಿರ್ಧಾರವು ‘ಜನ ಮರಳು’ ಕ್ರಮವಾಗಿದೆ. ದೂರ ಸಂಪರ್ಕ ಪರವಾನಿಗೆಯ ನಿಯಮ ಹಾಗೂ ಶರ್ತಗಳನ್ವಯ, ಕಾಲ್ ಡ್ರಾಪ್ ಪ್ರಮಾಣವು ಶೇ.2ರ ಮಿತಿಯನ್ನು ಮೀರಿದರೆ ಮಾತ್ರ ನಿರ್ವಾಹಕರು ದಂಡ ತೆರಬೇಕಾಗುತ್ತದೆ. ಆದರೆ, ಯಾವನೇ ನಿರ್ವಾಹಕ ಇದುವರೆಗೆ ಆ ಮಿತಿಯನ್ನು ಮೀರಿಲ್ಲವೆಂದು ಸೇವಾ ಒದಗಣೆದಾರರು ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದರು.
ಕಾಲ್ ಡ್ರಾಪ್‌ಗೆ ದಂಡ ವಿಧಿಸುವ ತನ್ನ ನಿರ್ಧಾರವು ಈ ಸಮಸ್ಯೆಯನ್ನು ನಿಯಂತ್ರಿಸುವ ಕಡಿಮೆ ಆಕ್ರಮಣ ಶೀಲ ಮಾರ್ಗವಾಗಿದೆ. ದೂರವಾಣಿ ಸಂಸ್ಥೆಗಳು ಭಾರೀ ಆದಾಯ ಗಳಿಸುತ್ತಿರುವುದರಿಂದ ಮೂಲ ಸೌಕರ್ಯಕ್ಕೆ ತಮ್ಮ ಹೂಡಿಕೆಯನ್ನು ಹೆಚ್ಚಿಸಬೇಕೆಂದು ನ್ಯಾಯಾಲಯಕ್ಕೆ ಟ್ರಾಯ್ ಹೇಳಿತ್ತು.
ಟ್ರಾಯ್ ಆದೇಶಕ್ಕೆ ಹಲವು ತಿಂಗಳುಗಳಿಗೂ ಮೊದಲೇ ಸರಕಾರವು ಕಾಲ್ ಡ್ರಾಪ್ ಕುರಿತು ಕಳವಳ ವ್ಯಕ್ತಪಡಿಸಿತ್ತು. ಅದರಿಂದ ಜನ ಸಾಮಾನ್ಯರಿಗೆ ನೇರ ಪರಿಣಾಮವಾಗುತ್ತದೆಯೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು.
ತನ್ನ ಶಿಫಾರಸಿಗೆ ಮೊದಲು ಟ್ರಾಯ್ ಮೊಬೈಲ್ ನಿರ್ವಾಹಕರು ಹಾಗೂ ಬಳಕೆದಾರರ ಗುಂಪುಗಳು ಸೇರಿದಂತೆ ಸಂಬಂಧಿಸಿದವರೊಡನೆ ಸಮಾಲೋಚಿಸಿತ್ತು.







