ಭಾರತೀಯರ ವಿರುದ್ಧ ಎಸಗಿದ ತಾರತಮ್ಯ: ಸರಕಾರ
ಅಮೆರಿಕದ ವೀಸಾ ಶುಲ್ಕ ಹೆಚ್ಚಳ
ಹೊಸದಿಲ್ಲಿ, ಮೇ 11: ಅಮೆರಿಕ ತನ್ನ ವೀಸಾ ಶುಲ್ಕವನ್ನು ಹೆಚ್ಚು ಮಾಡಿರುವುದು, ಆ ದೇಶದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಕೆಲಸ ಮಾಡಲು ಬಯಸಿರುವ ಭಾರತೀಯರ ವಿರುದ್ಧ ಎಸಗಿದ ತಾರತಮ್ಯವಾಗಿದೆ ಎಂದು ಸರಕಾರ ಬುಧವಾರ ಹೇಳಿದೆ.
ಅಮೆರಿಕದಲ್ಲಿ ಏಳಿಗೆ ಕಾಣುತ್ತಿರುವ ಐಟಿ ಉದ್ಯಮದಲ್ಲಿ ಭಾರತೀಯ ಐಟಿ ವೃತ್ತಿಪರರು ಕೆಲಸ ಮಾಡದಂತೆ ನೋಡಿಕೊಳ್ಳುವ ಯಾವುದೇ ತಾರತಮ್ಯ ನೀತಿಯನ್ನು ಅಮೆರಿಕ ಹೊಂದಬಾರದು ಎಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹೇಳಿಕೆಯೊಂದನ್ನು ನೀಡಿದ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದರು.
ಎಚ್-1ಬಿ ಮತ್ತು ಎಲ್1 ವೀಸಾ ಶುಲ್ಕ ಏರಿಕೆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಸರಕಾರದ ಉನ್ನತ ಮಟ್ಟದಲ್ಲಿ ಪ್ರಸ್ತಾಪಿಸಿದ್ದಾರೆ ಹಾಗೂ ಈ ವಿಷಯವನ್ನು ವ್ಯಾಪಾರಿ ಮಾತುಕತೆಗಳಲ್ಲೂ ಎತ್ತಿಕೊಳ್ಳಲಾಗುವುದು ಎಂದು ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಅವರು ತಿಳಿಸಿದರು.
ನ್ಯಾಶನಲ್ ಅಸೋಸಿಯೇಶನ್ ಆಫ್ ಸಾಫ್ಟ್‌ವೇರ್ ಆ್ಯಂಡ್ ಸರ್ವಿಸಸ್ ಕಂಪೆನಿ (ನಾಸ್ಕಾಂ) ಅಂದಾಜಿಸಿರುವಂತೆ, ಅಮೆರಿಕದ ವೀಸಾ ಶುಲ್ಕ ಏರಿಕೆಯಿಂದಾಗಿ ಭಾರತೀಯ ಐಟಿ ಘಟಕಗಳ ಮೇಲೆ ವರ್ಷಕ್ಕೆ 400 ಮಿಲಿಯನ್ ಡಾಲರ್ (2,657 ಕೋಟಿ ರೂಪಾಯಿ) ಹೆಚ್ಚುವರಿ ಹೊರೆ ಬೀಳಲಿದೆ.





