ಸಹ್ಯಾದ್ರಿಯಲ್ಲಿ ಮೇ 13, 14ರಂದು ‘ಏರೋಫಿಲಿಯಾ’
ರಿಮೋಟ್ ಕಂಟ್ರೋಲ್ ವಿಮಾನಗಳ ಮಾದರಿ ಪ್ರದರ್ಶನ
ಮಂಗಳೂರು, ಮೇ 11: ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜು ವತಿಯಿಂದ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಮೇ 13 ಹಾಗೂ 14ರಂದು ‘ಏರೊಫಿಲಿಯಾ-2016’ ರಾಷ್ಟ್ರಮಟ್ಟದ ಏರೋ ಮಾದರಿಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಸಹ್ಯಾದ್ರಿ ಕ್ಯಾಂಪಸ್ನಲ್ಲಿ ನಡೆಯುವ ಈ ಎರಡು ದಿನಗಳ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಾವು ತಯಾರಿಸಿದ ವಿವಿಧ ಮಾದರಿಯ ಏರ್ಕ್ರಾಫ್ಟ್ನ ಮಾದರಿಗಳನ್ನು ವಿದ್ಯುಚ್ಛಾಲಿತ ವ್ಯವಸ್ಥೆಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಪ್ರದರ್ಶಿಸುವರು. ಗರಿಷ್ಠ ಪ್ರಮಾಣದಲ್ಲಿ ಕೊಂಡೊಯ್ಯಬಲ್ಲ ಸಾಮರ್ಥ್ಯದ ಏರ್ ಕ್ರಾಫ್ಟ್ಗಳ ವೌಲ್ಯಾಂಕನ ಮಾಡಲಾಗುವುದು. ಎರಡು ಸುತ್ತುಗಳಲ್ಲಿ ಯಶಸ್ಸಿನ ಸಾಮರ್ಥ್ಯವನ್ನು ಪರೀಕ್ಷಿಸಲಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ರೇಡಿಯೊ ಫೈಯರ್ಸ್ಗಳು ಭಾಗವಹಿಸುತ್ತಿರುವುದು ಸ್ಪರ್ಧೆಯ ವಿಶೇಷ ಆಕರ್ಷಣೆ ಎಂದು ಪ್ರಾಂಶುಪಾಲ ಡಾ.ಉಮೇಶ್ ಭೂಷಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದರಲ್ಲಿ ನಾಲ್ಕು ಉನ್ನತ ಭಾರತೀಯ ತಾಂತ್ರಿಕ ಸಂಸ್ಥೆಗಳು, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು ಸ್ಪರ್ಧೆಗೆ ನೋಂದಣಿ ಮಾಡಿಸಿವೆ. ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ಖರಗ್ಪುರ, ಐಐಟಿ ಕಾನ್ಪುರ ಹಾಗೂ ಸುರತ್ಕಲ್ ಎನ್ಐಟಿಕೆ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ಕೊಂಬಾಟ್ ಏರ್ಕ್ರಾಫ್ಟ್ನ ಸಿಸ್ಟಮ್ಸ್ ಇಂಜಿನಿಯರ್ ಎ.ವಿ. ಅರವಿಂದ್, ಎಡಿಎ ಎಲ್ಸಿಎ -ತೇಜಸ್ನ ಅವಿಯೊನಿಕ್ಸ್ನ ಇಲೆಕ್ಟ್ರಾನಿಕ್ಸ್ ಇಂಜಿನಿಯರ್ ಚಿನ್ಮಯ ಹಾಗೂ ಟೆಕ್ಸಾಸ್ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪವನ್ ಪ್ರಭಾಕರ್ ಉದ್ಘಾಟಿಸುವರು. ಸಹ್ಯಾದ್ರಿ ಕಾಲೇಜಿನ ಟೀಮ್ ಚಾಲೆಂಜರ್ಸ್, ಕಾಲೇಜಿನ ಆಡಳಿತ ಮಂಡಳಿ, ಯುಎಸ್ಎದ ಟೆಕ್ಸಾಸ್ನಲ್ಲಿ ನಡೆದ ಎಸ್ಎಇ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ತಂಡ ಈ ಸ್ಪರ್ಧೆಯನ್ನು ಆಯೋಜಿಸಿದೆ. ಏರೋಫಿಲಿಯಾ-2016ರ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ ಬಹುಮಾನ 30 ಸಾವಿರ ರೂ. ಹಾಗೂ ತೃತೀಯ ಬಹುಮಾನ 15 ಸಾವಿರ ರೂ. ನೀಡಲಾಗುವುದು. ಎರಡು ತಂಡಗಳಿಗೆ 5 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುವುದು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗಾಗಿ ಏರೊಫಿಲಿಯಾ-2016 ಏರ್ ಷೋ ಮೇ 13ರ ಪೂರ್ವಾಹ್ನ 11:15ರಿಂದ 12:15ರವರೆಗೆ ಹಾಗೂ ಮೇ 14ರಂದು ಸಂಜೆ 4 ರಿಂದ 5 ಗಂಟೆಯವರೆಗೆ ಆಯೋಜಿಸಿದ್ದು, ಇದು ಗಣಿತ, ಇತಿಹಾಸ ಕಲೆ ಮತ್ತು ಗ್ರಾಫಿಕ್ಸ್ ಹಾಗೂ ವಿಜ್ಞಾನ ವಿಷಯವನ್ನು ಒಳಗೊಂಡ ಬಹು ವೈವಿಧ್ಯದ ಕಲಿಕೆಯ ಅನುಭವ ನೀಡಲಿದೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೂ ಏರ್ಷೋ ವೀಕ್ಷಣೆಗೆ ಅವಕಾಶವಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅನ್ವರ್, ಅಮೃತಾ, ನಿಶಾಂತ್ ಮತ್ತು ಕೇದಿಗೆ ವಸಂತ ರಾವ್ ಉಪಸ್ಥಿತರಿದ್ದರು.