ಸೋಮಾಲಿಯ ಎಂದ ಮೋದಿ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ: ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ

ಎರ್ನಾಕುಲಂ ಮೇ 12: ಕೇರಳವನ್ನು ಸೋಮಾಲಿಯಕ್ಕೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಕಾನೂನು ಕ್ರಮಗಳ ಮೂಲಕ ಎದುರಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ. ಚುನಾವಣಾ ಆಯೋಗದೊಂದಿಗೆ ಈ ಬಗ್ಗೆ ಏನು ಮಾಡಲು ಸಾಧ್ಯ ಎಂದು ಪರಿಶೀಲಿಸಲಾಗುತ್ತಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಚಾಂಡಿ ತಿಳಿಸಿದ್ದಾರೆಂದು ವರದಿಯಾಗಿದೆ. ಸೋಮಾಲಿಯ ಟೀಕೆಯ ಮೂಲಕ ಮೋದಿ ಕೇರಳದ ಜನರನ್ನು ಅವಮಾನಿಸಿದ್ದಾರೆ ಎಂದ ಉಮ್ಮನ್ ಚಾಂಡಿ ಕೇರಳ ಮೋದಿ ಆಳ್ವಿಕೆ ನಡೆಸುತ್ತಿರುವ ಭಾರತದ ಭಾಗವೆಂಬುದನ್ನು ಹೇಳಿಕೆ ನೀಡುವಾಗ ಯೋಚಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೋದಿ ಆಳಿದ ಗುಜರಾತ್ ಹಲವು ಅಭಿವೃದ್ಧಿ ಸೂಚಿಗಳಲ್ಲಿ ಕೇರಳಕ್ಕಿಂತ ಹಿಂದಿದೆ. ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ಕೇರಳ ದೇಶದಲ್ಲಿಯೇ ಪ್ರಥಮಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿಹೇಳಿದ್ದಾರೆ.
ಪೆರುಂಬಾವೂರ್ ಆದಿವಾಸಿ ಮಕ್ಕಳು ಮಲಿನ ಕೇಂದ್ರದಿಂದ ಹಳಸಲು ಆಹಾರವನ್ನು ಸೇವಿಸುತ್ತಿದ್ದಾರೆ ಎಂಬ ವಾರ್ತೆಯ ಹಿನ್ನೆಲೆಯಲ್ಲಿ ಮೋದಿ ಕೇರಳವನ್ನು ಸೋಮಾಲಿಯಕ್ಕೆ ಹೋಲಿಸಿದ್ದರು. ವಾರ್ತೆ ಬಂದೊಡನೆ ಈ ಕುರಿತು ತನಿಖೆ ನಡಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇಲಾಖೆ ನಡೆಸಿದ ತನಿಖೆಯಲ್ಲಿ ಮಾಧ್ಯಮಗಳಲ್ಲಿ ತಪ್ಪಾದ ಸುದ್ದಿ ಬಂದಿತ್ತು ಎಂದು ಸಾಬೀತಾಗಿದೆ ಎಂದ ಅವರು ಒಬ್ಬ ಪ್ರಧಾನಿಯಿಂದ ಇಂತಹ ವರ್ತನೆಗಳನ್ನು ಯಾವತ್ತೂ ನಿರೀಕ್ಷಿಸಿರಲಿಲ್ಲ. ಮೋದಿ ಬಿಜೆಪಿ ನಾಯಕ ಮಾತ್ರವಲ್ಲ ಭಾರತದ ಪ್ರಧಾನಿ ಎಂಬುದು ಅವರಿಗೆ ನೆನಪಿರಬೇಕು. ರಾಜಕೀಯವಾಗಿ ವಿಮರ್ಶಿಸುವ ಬದಲು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ವರದಿಯಾಗಿದೆ.







