ರಾಜ್ಯ ಸರಕಾರವನ್ನು ಟೀಕಿಸುವ ನೈತಿಕತೆ ಬಿಜೆಪಿಗಿಲ್ಲ: ಐವನ್

ಮಂಗಳೂರು, ಮೇ12: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು 3 ವರ್ಷ ಪೂರ್ತಿಯಾಗಿದ್ದು, ಬರ ಹಿನ್ನೆಲೆಯಲ್ಲಿ ಯಾವುದೇ ಸಂಭ್ರಮಾಚರಣೆ ಮಾಡದಿರಲು ತೀರ್ಮಾನಿಸಲಾಗಿದೆ. ಚುನಾವಣೆ ಸಂದರ್ಭ ಪ್ರಣಾಳಿಕೆಯಲ್ಲಿ 136 ಆಶ್ವಾಸನೆ ನೀಡಿದ್ದು, ಅದರಲ್ಲಿ 98 ಬೇಡಿಕೆ ಪೂರೈಸಿದೆ. ಆದರೆ ತಮ್ಮ ಅಧಿಕಾರವಧಿಯಲ್ಲಿ ಭ್ರಷ್ಟ ಆಡಳಿತ ನೀಡಿದ ಬಿಜೆಪಿಗೆ, ಸರಕಾರವನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಅವರು ಗುರುವಾರ ತನ್ನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ರಾಜ್ಯಸರ್ಕಾರವನ್ನು ಟೀಕಿಸಿ ಸಿದ್ಧರಾಮಯ್ಯರನ್ನು ಸುಳ್ಳುಗಾರ, ಮಜಾವಾದಿ ಎಂದು ಹೇಳಿರುವ ಜಗದೀಶ್ ಶೆಟ್ಟರು, ಢೋಂಗಿವಾದಿಗಳು ಎಂದು ಪ್ರತ್ಯಾರೋಪಿಸಿದರು.
ರಾಜ್ಯದಲ್ಲಿ ತಮ್ಮ ಸರಕಾರದ ಮುಖ್ಯಮಂತ್ರಿಗಳು ಮಾಡಿರುವ ಅನ್ಯಾಯವನ್ನು ಪುನರ್ ಪರಿಶೀಲಿಸಿ ಆತ್ಮಶೋಧನೆ ಮಾಡಿಕೊಳ್ಳಬೇಕು ಎಂದು ಬಿಜೆಪಿಗೆ ತಿರುಗೇಟು ನೀಡಿದ ಐವನ್, ಬಿಜೆಪಿಯವರು ತಮ್ಮ ಸರಕಾರವಿದ್ದಾಗಲೇಭ್ರಷ್ಟ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದವರು ಎಂದು ಆಪಾದಿಸಿದರು.
ರಾಜ್ಯದ ಗಡಿ ರೇಖೆಯನ್ನು ಬದಲಾಯಿಸಿ ಸಂಪತ್ತನ್ನು ದೋಚಿರುವ ಬಿಜೆಪಿಯ ಜಗದೀಶ್ ಶೆಟ್ಟರ್, ಯಡ್ಡಿಯೂರಪ್ಪ, ಈಶ್ವರಪ್ಪ ಭ್ರಷ್ಟರಲ್ಲವೆ ಎಂದು ಪ್ರಶ್ನಿಸಿದ ಐವನ್, ಮುಖ್ಯಮಂತ್ರಿಯವರ ವಾಚ್ ಬಗ್ಗೆ ಅವರನ್ನು ಮಜಾವಾದಿ ಎನ್ನುವ ಜಗದೀಶ್ ಶೆಟ್ಟರ್, ಬಿಜೆಪಿಯ ಹಾಲಪ್ಪ, ರೇಣುಕಾಚಾರ್ಯ, ನಿರಾಣಿ ಮೊದಲಾದವರಿಗೆ ಮಜಾವಾದಿಗಳಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯ ಅವಧಿಯಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಭ್ರಷ್ಟ ರಾಜ್ಯ ಎಂಬ ಅಪಕೀರ್ತಿಗೆ ಒಳಗಾಗಿತ್ತು. ಓರ್ವ ಹಿರಿಯ ರಾಜಕಾರಣಿಯಾಗಿ, ವಿಪಕ್ಷ ನಾಯಕರಾಗಿ, ಮಾಜಿ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್‌ರವರು ಬಳಕೆ ಮಾಡಿರುವ ಭಾಷೆಯಿಂದ ನೋವಾಗಿದೆ. ಅವರು ಅದನ್ನು ಹಿಂದಕ್ಕೆ ಪಡೆಯಬೇಕು ಎಂದು ಐವನ್ ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರ ಸ್ವೀಕಾರ ಮಾಡಿದ ದಿನವೇ 6 ಬೇಡಿಕೆ ಈಡೇರಿಸಿದ್ದಾರೆ. ರಾಜ್ಯ ಸರ್ಕಾರ ಹಿಂದುಳಿದ ವರ್ಗಕ್ಕೆ ಅತೀ ಹೆಚ್ಚು ಕಾರ್ಯಕ್ರಮ ನೀಡಿದ್ದು, 1 ಕೋಟಿ 50ಲಕ್ಷ ಕುಟುಂಬಗಳಿಗೆ ಬಿಪಿಎಲ್ ವಿತರಣೆ ಮಾಡಿದೆ. ರಾಜ್ಯದಲ್ಲಿ 27ಜಿಲ್ಲೆಗಳಲ್ಲಿ ತೀವ್ರ ಬರಗಾಲವಿದೆ. ಬರ ಹಿನ್ನೆಲೆಯಲ್ಲಿ ಕೇಂದ್ರಕ್ಕೆ 12345 ಕೋಟಿ ರೂ. ಪರಿಹಾರ ನೀಡಲು ಮಾಡವಿ ಮಾಡಿದ್ದೇವೆ. ಆದರೂ ಈತನಕ ಯಾವುದೇ ಧನಾತ್ಮಕ ಸೂಚನೆ ಬಂದಿಲ್ಲ ಎಂದು ಬೇಸರಿಸಿದರು.
ನರೇಗಾದಡಿ ಕೇಂದ್ರದಿಂದ 2015-16ನೇ ಸಾಲಿನಲ್ಲಿ ರೂ. 35,766 ಕೋಟಿ ಬಿಡೆಗಡೆ ಆಗಿದ್ದರೆ, 2016-17ನೇ ಸಾಲಿನಲ್ಲಿ 30,224 ಕೋಟಿ ರೂ. ಮೂಲಕ 5000 ಕೋಟಿ ರೂ.ಗಳಿಗೂ ಅಧಿಕ ಹಣ ಕಡಿತ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಅಭಿವೃದ್ದಿ ಬಗ್ಗೆ ಟೀಕೆ ಮಾಡುವುದು ತಪ್ಪಲ್ಲ. ಆದರೆ ವೈಯಕ್ತಿಕ ಟೀಕೆ ಸರಿಯಲ್ಲ. ರಾಜ್ಯ ಸರ್ಕಾರ 3 ವರ್ಷ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ. ರಾಜ್ಯದ ಮಂತ್ರಿ ಜನಪರ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಪಿ. ಮನುರಾಜ್, ಮಹೇಶ್ ಕೋಡಿಕಲ್, ಮಹಮ್ಮದ್ ರಫೀಕ್, ಓಸ್ವಾಲ್ಡ್ ಡಿಕುನ್ಹ, ಅರುಣ್ ಕ್ರಾಸ್ತಾ, ತೆರೆಸಾ ಪಿಂಟೋ ಉಪಸ್ಥಿತರಿದ್ದರು.





