ಸುಳ್ಯ ನ.ಪಂ. ಸಭೆ: ನಿರ್ಣಯ ಘೋಷಣೆಗೆ ಆಗ್ರಹಿಸಿ ಸದಸ್ಯರ ಧರಣಿ

ಸುಳ್ಯ, ಮೇ 12: ಸಾಮಾನ್ಯ ಸಭೆಯ ನಿರ್ಣಯವನ್ನು ಸಭೆ ಮುಗಿಯುವ ಮುನ್ನವೇ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಸದಸ್ಯರೊಬ್ಬರು ಸಭೆಯ ಮಧ್ಯೆ ಧರಣಿ ಕುಳಿತ ವಿಶಿಷ್ಟ ವಿದ್ಯಮಾನ ಸುಳ್ಯ ನಗರ ಪಂಚಾಯತ್‌ನಲ್ಲಿ ನಡೆದಿದೆ.
ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಪಂಚಾಯತ್ ಆವರಣದಲ್ಲಿ ನಿರ್ಮಾಣಗೊಂಡ ಅಂಗವಿಕಲರ ಕಚೇರಿಗೆ ಪೀಠೋಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಸದಸ್ಯ ಕೆ.ಎಂ.ಮುಸ್ತಫಾ ಆರೋಪಿಸಿದರು. ವಿಳಾಸವೇ ಇಲ್ಲದ ಸಂಸ್ಥೆಯಿಂದ ತುಲನಾತ್ಮಕ ಬೋಗಸ್ ಕೊಟೇಶನ್ ಪಡೆಯಲಾಗಿದೆ. ಎರಡೂ ಕೊಟೇಶನ್ ಒಂದೇ ಹಸ್ತಾಕ್ಷರದಲ್ಲಿದೆ ಎಂದವರು ಹೇಳಿದರು. ದಾಖಲೆಗಳಲ್ಲಿ ತಪ್ಪಾಗಿರಬಹುದು, ಆದರೆ ಕೊಟೇಶನ್‌ನಲ್ಲಿ ನಮೂದಿಸಿದಂತೆ 70 ಸಾವಿರದ ಪೀಠೋಪಕರಣ ಖರೀದಿಸಲಾಗಿದೆ ಎಂದು ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಸಮಜಾಯಿಷಿ ನೀಡಿದರು.
ಕಚೇರಿಯಲ್ಲಿ ಕುರ್ಚಿ ಮಾತ್ರ ಇದ್ದದ್ದು. ಮಾಹಿತಿ ಹಕ್ಕಿನಡಿ ಅರ್ಜಿ ಬಂದ ಬಳಿಕ ನಕಲಿ ದಾಖಲೆ ಸೃಷ್ಟಿಸಿ ಪೀಠೋಪಕರಣ ತರಲಾಗಿದೆ ಎಂದು ಎಸ್‌ಡಿಪಿಐ ಸದಸ್ಯ ಕೆ.ಎಸ್.ಉಮ್ಮರ್ ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯರು ನೀಡಿದ ಅರ್ಜಿ ಸಭೆಯ ವಿಷಯ ಸೂಚಿಯಲ್ಲಿ ಬರುತ್ತಿಲ್ಲ, ಸಭೆಯಲ್ಲಿ ನಿರ್ಣಯ ಬರೆಯದೇ ಬಳಿಕ ಬೇಕಾದಂತೆ ಬರೆಯಲಾಗುತ್ತದೆ. ಸಭೆ ಮುಗಿಸುವ ಮುನ್ನ ಕೈಗೊಂಡ ನಿರ್ಣಯವನ್ನು ಘೋಷಿಸಬೇಕು ಎಂದವರು ಆಗ್ರಹಿಸಿದರು.
10 ದಿನಗಳ ಅವಕಾಶ ಬೇಕು ಎಂದು ಅಧ್ಯಕ್ಷರು ಹೇಳಿದಾಗ ಇದನ್ನು ಖಂಡಿಸಿ ಉಮ್ಮರ್ ಅಧ್ಯಕ್ಷರ ಪೀಠದ ಎದುರು ಧರಣಿ ಕುಳಿತರು. ಸಭೆಯ ನಿರ್ಣಯವನ್ನು ಘೋಷಿಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದ ಬಳಿಕ ಸ್ವಸ್ಥಾನಕ್ಕೆ ತೆರಳಿದರು. ಪಂಚಾಯತ್ ಸದಸ್ಯರೂ ಮಾಹಿತಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸುವಂತೆ ಮುಖ್ಯಾಧಿಕಾರಿ ಹೇಳಿದ್ದಾರೆ. ಹಾಗಾದರೆ ಸದಸ್ಯರಿಗೆ ಏನೂ ಅಧಿಕಾರ ಇಲ್ಲವೇ ಎಂದೂ ಪ್ರಶ್ನಿಸಿದರು. ಕ್ರಿಯಾ ಯೋಜನೆ ಮಾಡುವಾಗ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದವರು ಆಕ್ಷೇಪಿಸಿದರು.
ಇಂಜಿನಿಯರ್ ವರ್ಗಾವಣೆಗೆ ಆಗ್ರಹ:
ಸಭೆಗೆ ಗೈರು ಹಾಜರಾದ ಪಂಚಾಯತ್ ಇಂಜಿನಿಯರ್ ವರ್ಗಾವಣೆ ಮಾಡುವಂತೆ ನಿರ್ಣಯ ಕೈಗೊಳ್ಳಬೇಕೆಂದು ಸದಸ್ಯ ರಮಾನಂದ ರೈ ಆಗ್ರಹಿಸಿದರು. ಉಮ್ಮರ್, ಗೋಪಾಲ ನಡುಬೈಲು ಇದನ್ನು ಬೆಂಬಲಿಸಿದರು. ಇಂಜಿನಿಯರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಮುಖ್ಯಾಧಿಕಾರಿ ಹೇಳಿದರು. ಇದಕ್ಕೆ ಮುಸ್ತಫ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಕೆಲಸ ಆಗಿದೆ. ಈಗ ಅವರು ಅನಾರೋಗ್ಯದಿಂದ ವಿಶ್ರಾಂತಿಯಲ್ಲಿದ್ದಾರೆ. ನಿರ್ಣಯ ಕೈಗೊಳ್ಳುವುದು ಬೇಡ ಎಂದವರು ಹೇಳಿದರು. ಈ ಸಂದರ್ಭ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಇಂಜಿನಿಯರ್ ಸರಿಯಾಗಿ ಕೆಲಸ ಮಾಡದೇ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಕುಡಿಯುವ ನೀರಿನಂತಹ ತುರ್ತು ಕಾಮಗಾರಿಗಳಿಗೂ ಸ್ಪಂದಿಸುತ್ತಿಲ್ಲ, ಹಾಗಿದ್ದೂ ಅವರು ಮಹಿಳೆಯಾಗಿದ್ದರಿಂದ ವರ್ಗಾವಣೆಗೆ ನಿರ್ಣಯ ಕೈಗೊಳ್ಳುವುದು ಬೇಡ. ಅವರಿಗೆ ಇಲ್ಲಿನ ವಾತಾವರಣ ಹಿಡಿಸುವುದಿಲ್ಲ. ಊರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅವರು ರಜೆಯಲ್ಲಿ ತೆರಳಲಿ, ಆಗ ಬೇರೆ ಕಡೆಯಿಂದ ಇಂಜಿನಿಯರ್ ನೇಮಕ ಮಾಡಲಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು.
ಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ ವೇದಿಕೆಯಲ್ಲಿದ್ದರು.







