ಸುಳ್ಯ: ಪರಿಶಿಷ್ಟ ಜಾತಿ-ಪಂಗಡದ ಕುಂದುಕೊರತೆ ಸಭೆ

ಸುಳ್ಯ, ಮೇ 12: ಮೇನಾಲದಲ್ಲಿ ನಡೆಯುವ ಹಿಂದೂ ಸದ್ಭಾವನಾ ಸಮಾವೇಶದ ಮೈದಾನಕ್ಕೆ ಅಂಬೇಡ್ಕರ್ ಹೆಸರನ್ನು ಇಟ್ಟಿರುವ ಕ್ರಮ ಗುರುವಾರ ನಡೆದ ಪರಿಶಿಷ್ಟ ಜಾತಿ-ಪಂಗಡದ ಕುಂದುಕೊರತೆ ಸಭೆಯಲ್ಲಿ ಮಾತಿನ ಚಕಮಕಿಗೆ ಕಾರಣವಾಯಿತು.
ಅಂಬೇಡ್ಕರ್ ಎಲ್ಲಾ ಧರ್ಮದವರಿಗೂ ಸೇರಿದವರು. ಆದರೆ ಒಂದು ಜನಾಂಗದವರು ನಡೆಸುವ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಹೆಸರನ್ನು ಇಟ್ಟು ಕಾರ್ಯಕ್ರಮವನ್ನು ವಿವಾದಾತ್ಮಕವಾಗಿ ಮಾಡಲಾಗಿದೆ. ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂದು ಆನಂದ ಬೆಳ್ಳಾರೆ ದೂರಿದರು. ಇದಕ್ಕೆ ದಾಸಪ್ಪ, ಅಚ್ಯುತ ಮಲ್ಕಜೆ ಸೇರಿದಂತೆ ಹಲವರು ದನಿಗೂಡಿಸಿದರು. ಆದರೆ ಶೀನಪ್ಪ ಬಯಂಬು, ಶಂಕರ ಪೆರಾಜೆ ಇದನ್ನು ಖಂಡಿಸಿದರು. ಅಂಬೇಡ್ಕರ್ ಹೆಸರಿನ ಬಳಕೆಗೆ ಯಾವುದೇ ನಿರ್ಬಂಧ ಇಲ್ಲ. ಸದ್ಭಾವನಾ ಸಂಗಮದ ವೇದಿಕೆಗೆ ಅಂಬೇಡ್ಕರ್ ಹೆಸರನ್ನು ಇಡಲಾಗಿದೆ. ಇದರಲ್ಲಿ ಯಾವುದೇ ವಿವಾದ ಇಲ್ಲ ಎಂದವರು ಹೇಳಿದರು. ಈ ಸಂದರ್ಭ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು.
ಪೈಚಾರಿನಲ್ಲಿ ಹೆದ್ದಾರಿಗೆ ವೃತ್ತ ನಿರ್ಮಿಸಿ ಅದಕ್ಕೆ ಅಂಬೇಡ್ಕರ್ ಹೆಸರನ್ನು ಇಡಬೇಕೆಂದು ಆನಂದ ಬೆಳ್ಳಾರೆ ಆಗ್ರಹಿಸಿದರು. ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮನೆಗಳ ಗೋಡೆ ಕಾಮಗಾರಿ ಮುಗಿದು 1 ತಿಂಗಳಾದರೂ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದವರು ಆರೋಪಿಸಿದರು. 94ಸಿಯಡಿ ಅರ್ಜಿ ಸಲ್ಲಿಸಿದ ಪರಿಶಿಷ್ಟರಿಗೆ ಇನ್ನೂ ಹಕ್ಕುಪತ್ರ ನೀಡದೇ ಇರುವುದರಿಂದ ಅವರಿಗೆ ವಸತಿ ಯೋಜನೆ ಪ್ರಯೋಜನ ಸಿಗುತ್ತಿಲ್ಲ ಎಂದು ಸಭಿಕರು ದೂರಿದರು.
ಹೆಚ್ಚಿನ ಪರಿಶಿಷ್ಟರು ಗೋಮಾಳ, ಅರಣ್ಯ ಭೂಮಿಯಲ್ಲಿ ನೆಲೆಸಿರುವುದರಿಂದ ಹಕ್ಕುಪತ್ರ ನೀಡಲು ಸಮಸ್ಯೆಯಾಗಿದೆ ಎಂದು ತಹಶೀಲ್ದಾರ್ ಅನಂತ ಶಂಕರ ಉತ್ತರಿಸಿದರು. ಅಂಬೇಡ್ಕರ್ ವಸತಿ ಯೋಜನೆಯಲ್ಲಿ 423 ಫಲಾನುಭವಿಗಳ ಆಯ್ಕೆ ಗುರಿ ಇದ್ದರೂ 229 ಫಲಾನುಭವಿಗಳು ಮಾತ್ರ ಆಯ್ಕೆ ಆಗಿದ್ದಾರೆ. ಹಕ್ಕುಪತ್ರ ಇಲ್ಲದೆ ಯೋಜನೆಯಲ್ಲಿ ಸವಲತ್ತು ನೀಡಲು ಆಗುತ್ತಿಲ್ಲ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ಹೇಳಿದರು.
ತಾಲೂಕಿನ 21 ಗ್ರಾಮಗಳಲ್ಲಿ ಡಿಸಿ ಮನ್ನಾ ಜಮೀನಿನ ಸರ್ವೇ ಕಾರ್ಯ ಮುಗಿದಿದೆ ಎಂದು ಅಧಿಕಾರಿ ಉತ್ತರಿಸಿದಾಗ ಇಲಾಖೆಯವರು ಹೋರಾಟ ಸಮಿತಿಯವರ ಗಮನಕ್ಕೆ ಬಾರದೇ ಸರ್ವೇ ಮಾಡಿದ್ದಾರೆ. ಪುನಃ ಸರ್ವೇ ಮಾಡಬೇಕು ಎಂದು ಸಭಿಕರು ಒತ್ತಾಯಿಸಿದರು.
ಬಳ್ಪಗ್ರಾಮದ ಕೊನ್ನಡ್ಕ ಎಂಬಲ್ಲಿ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ಆಗಿದೆ. ಒಮ್ಮೆ ನೀರು ಬಂದಿತ್ತು ಆದರೆ ಈಗ ಪಂಪು ಪೈಪುಗಳನ್ನು ಕಿತ್ತು ಕೊಂಡೊಯ್ಯಲಾಗಿದೆ. ಈ ಕುರಿತು ಗ್ರಾಮ ಪಂಚಾಯತ್‌ನಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಅಚ್ಚುತ ಮಲ್ಕಜೆ ದೂರಿದರು. ಬೆಳ್ಳಾರೆ ಗ್ರಾಮ ಪಂಚಾಯತ್‌ನಲ್ಲಿ 35 ಲಕ್ಷದ ಕಾಮಗಾರಿ ಆಗಿದೆ ಎಂದು ಸುಳ್ಳು ವರದಿ ನೀಡಿ ಬಿಲ್ ಮಾಡಲಾಗಿದೆ. ಆದರೆ ಅಲ್ಲಿ ಯಾವುದೇ ಕಾಮಗಾರಿ ಆಗಿಲ್ಲ, ಪಂಜ ಗ್ರಾಮದ ಕೂತ್ಕುಂಜ-ಚಾಳೆಗುಳಿ-ಬಸ್ತಿಕಾಡು ರಸ್ತೆ ನಿರ್ಮಿಸಲು ಪರಿಶಿಷ್ಟರೊಬ್ಬರ ಪಟ್ಟಾ ಜಮೀನನ್ನು ಒತ್ತುವರಿ ಮಾಡಲಾಗಿದೆ. ಪಿಡಿಒ ಸುಳ್ಳು ವರದಿ ನೀಡಿದ್ದು ಅವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಆನಂದ ಬೆಳ್ಳಾರೆ ಆಗ್ರಹಿಸಿದರು.
ಕೃಷಿ ಇಲಾಖೆಯಲ್ಲಿ ಅನಧಿಕೃತ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆಯ ಜೀಪಿನಲ್ಲಿ ಗ್ರಾಮ ಸಭೆಗಳಿಗೆ ಹೋಗಿ ಮಾಹಿತಿ ನೀಡುತ್ತಾರೆ ಎಂದು ಆನಂದ ಬೆಳ್ಳಾರೆ ಆರೋಪಿಸಿದರು. ತೋಟಗಾರಿಕಾ ಇಲಾಖೆಯಲ್ಲಿ ತಮಗೆ ಬೇಕಾದವರಿಗೆ ಮಾತ್ರ ಸವಲತ್ತುಗಳನ್ನು ನೀಡಿ ಅನುದಾನ ಮುಗಿದ ಮೇಲೆ ಸೀಮಿತ ಅನುದಾನ ಇದೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಾರೆ ಎಂದು ನಂದರಾಜ್ ಸಂಕೇಶ ಆರೋಪಿಸಿದರು.
ಎಡಮಂಗಲದಲ್ಲಿ ಸ್ವಚ್ಛತಾ ಆಂದೋಲನದಲ್ಲಿ ಶ್ರಮದಾನದ ಮೂಲಕ ನಿರ್ಮಿಸಿದ ಶೌಚಾಲಯಕ್ಕೆ ಸ್ವರ್ಣ ಗ್ರಾಮ ಯೋಜನೆಯಲ್ಲಿ ಬಿಲ್ ಮಾಡಲಾಗಿದೆ ಎಂದು ಸಭೆಯಿಂದ ಆರೋಪ ಕೇಳಿ ಬಂತು. ನಡುಗಲ್ಲಿನಲ್ಲಿ ವಾಣಿಜ್ಯ ಸಂಕೀರ್ಣಕ್ಕೆ 94ಸಿಯಡಿ ಹಕ್ಕುಪತ್ರ ನೀಡಲಾಗಿದೆ. ಅಲ್ಲಿಂದ 2 ಕಿ.ಮೀ. ದೂರದಲ್ಲಿರುವ ಮನೆಯ ರಶೀದಿ ನೀಡಿ ಹಕ್ಕುಪತ್ರ ಪಡೆದಿದ್ದು, ಅದನ್ನು ರದ್ದು ಮಾಡಬೇಕು ಎಂದು ಅಚ್ಯುತ ಗುತ್ತಿಗಾರು ಆಗ್ರಹಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಸಮಾಜ ಕಲ್ಯಾಣ ಅಧಿಕಾರಿ ರಾಮಕೃಷ್ಣ ಭಟ್, ಎಸ್ಸೈ ಚಂದ್ರಶೇಖರ್, ಎಎಸ್ಸೈ ಚಂದಪ್ಪ ವೇದಿಕೆಯಲ್ಲಿದ್ದರು.







