ಕಾಲನಿ ಸಮಸ್ಯೆ ಬಗ್ಗೆ ಅನ್ಯ ಗ್ರಾಮಸ್ಥರಿಂದ ಪ್ರಶ್ನೆ; ಗ್ರಾಮಸಭೆಯಲ್ಲಿ ಗೊಂದಲ
ಅರಿಯಡ್ಕ ಗ್ರಾಮಸಭೆ
ಪುತ್ತೂರು, ಮೇ 12: ಗ್ರಾಮ ಸಭೆಯಲ್ಲಿ ಅನ್ಯ ಗ್ರಾಮಸ್ಥರೊಬ್ಬರು ಕಾಲನಿ ಸಮಸ್ಯೆಯ ಬಗ್ಗೆ ಪ್ರಶ್ನಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿ, ಗ್ರಾಮಸಭೆಯಲ್ಲಿ ಗೊಂದಲ, ವಾಗ್ವಾದ, ಮಾತಿನ ಚಕಮಕಿ, ಹೊಡೆದಾಟ ಹಾಗೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಸೇವಾ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಗಿರಿಧರ್ ನಾಯ್ಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆದ ಘಟನೆ ಬುಧವಾರ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಂಚಾಯತ್‌ನ ಸಭೆಯಲ್ಲಿ ನಡೆಯಿತು.
ಗ್ರಾಮಸಭೆಯು ಅರಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಸವಿತಾರ ಅಧ್ಯಕ್ಷತೆಯಲ್ಲಿ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ಕಾವು-ಅಮ್ಚಿನಡ್ಕ ದಲಿತ ಕಾಲನಿಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾಲನಿ ನಿವಾಸಿಗಳ ಮನವಿ ಮೇರೆಗೆ ದಲಿತ ಸಂಘಟನೆಗಳ ಮುಖಂಡ ಅನ್ಯ ಗ್ರಾಮಸ್ಥ ಗಿರಿಧರ ನಾಯ್ಕ ಸಭೆಯಲ್ಲಿ ಪ್ರಶ್ನಿಸಲು ಮುಂದಾದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯೆ ಶಶಿಕಲಾ ಚೌಟ, ಇದು ಗ್ರಾಮ ಸಭೆ. ಇಲ್ಲಿ ಗ್ರಾಮಸ್ಥರಿಗೆ ಮಾತ್ರವೇ ಮಾತನಾಡಲು ಅವಕಾಶವಿದೆ ಹೊರತು ಇತರ ಗ್ರಾಮದವರಿಗೆ ಬಂದು ಮಾತನಾಡಲು ಅವಕಾಶವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹಾಗೂ ಗ್ರಾಪಂ ಸದಸ್ಯ ದಿವ್ಯನಾಥ ಶೆಟ್ಟಿ ಸೇರಿದಂತೆ ಕೆಲ ಸದಸ್ಯರು ಹಾಗೂ ಕೆಲ ಗ್ರಾಮಸ್ಥರು ಇದಕ್ಕೆ ಧ್ವನಿಗೂಡಿಸಿ ಹೊರ ಗ್ರಾಮದವರಿಗೆ ಮಾತನಾಡಲು ಅವಕಾಶ ಕೊಡಬಾರದು. ಅವರನ್ನು ಸಭೆಯಿಂದ ಹೊರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ಹೊರ ಗ್ರಾಮದವರನ್ನು ಸಭೆಯಿಂದ ಹೊರಕ್ಕೆ ಕಳುಹಿಸದಿದ್ದರೆ ನಾವು 10 ಮಂದಿ ಸದಸ್ಯರು ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ ಸದಸ್ಯೆ ಶಶಿಕಲಾ ಚೌಟ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ವೇದಿಕೆಯಿಂದ ಕೆಳಗಿದರು.
ಈ ಸಂದರ್ಭ ಮಾತನಾಡಿದ ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಹೊರ ಗ್ರಾಮದವರು ಎಂಬ ಕಾರಣಕ್ಕೆ ಅವರಿಗೆ ಸಭೆಯಲ್ಲಿ ಯಾವುದೇ ರೀತಿಯಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ. ಅವರು ವೀಕ್ಷಕರಾಗಿ ಸಭೆಯಲ್ಲಿ ಕುಳಿತುಕೊಳ್ಳಲಿ. ಸಭೆಯಿಂದ ಹೊರಕ್ಕೆ ಹೋಗುವಂತೆ ಹೇಳಲು ನಮಗೆ ಅಧಿಕಾರವಿಲ್ಲ ಎಂದರು. ಇದಕ್ಕೆ ಒಪ್ಪದ ಶಶಿಕಲಾ ಚೌಟ ಹಾಗೂ ಇತರ ಸದಸ್ಯರು ಅವರನ್ನು ಸಭೆಯಿಂದ ಹೊರಗಡೆ ಕಳುಹಿಸುವಂತೆ ಪಟ್ಟು ಹಿಡಿದರು. ಈ ಬಗ್ಗೆ ತೀವ್ರ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚರ್ಚಾ ನಿಯಂತ್ರಣಾಧಿಕಾರಿ, ತಾ.ಪಂ ಯೋಜನಾಧಿಕಾರಿ ಗಣಪತಿ ಭಟ್, ಗ್ರಾಮ ಸಭೆಯಲ್ಲಿ ಆ ಗ್ರಾಮಸ್ಥರು ಹೊರತುಪಡಿಸಿ ಇತರರಿಗೆ ಸಭೆಗೆ ಬಾರಬಾರದು ಎಂಬ ನಿಯಮವಿಲ್ಲ. ಆದರೆ ಅವರು ಗ್ರಾಮದ ಸಮಸ್ಯೆಗಳ ಬಗ್ಗೆ ಪ್ರಶ್ನಿಸುವಂತಿಲ್ಲ. ಸಮಸ್ಯೆಗಳಿದ್ದರೆ ಲಿಖಿತವಾಗಿ ತಿಳಿಸಬಹುದು ಎಂದು ಕಾನೂನಿನ ಬಗ್ಗೆ ಸ್ಪಷ್ಟನೆ ನೀಡಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.
ಗಿರಿಧರ್ ನಾಯ್ಕೆ ನೇತೃತ್ವದಲ್ಲಿ ಪ್ರತಿಭಟನೆ
ಅಮ್ಚಿನಡ್ಕ ದಲಿತ ಕಾಲನಿಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಲು ಅವಕಾಶ ನೀಡಿಲ್ಲ ಎಂದು ಆರೋಪಿಸಿ ದಲಿತ ಸೇವಾ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಗಿರಿಧರ ನಾಯ್ಕಿ ನೇತೃತ್ವದಲ್ಲಿ ಕಾಲನಿ ನಿವಾಸಿಗಳು ಸಭೆಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪಂಚಾಯತ್, ಪಿಡಿಒ ಹಾಗೂ ಸಭೆಯಲ್ಲಿ ಮಾತನಾಡಲು ಅವಕಾಶ ನೀಡದವರ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದಭರ್ದಲ್ಲಿ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಲೋಕೇಶ್ ಹಾಗೂ ಪಿಡಿಒ ಅಜಿತ್ ಪ್ರತಿಭಟನಾಕಾರರ ಮನವೊಲಿಸಿ ಒಂದು ವಾರದೊಳಗೆ ಕಾಲನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು. ಬಳಿಕ ಮಾತನಾಡಿದ ಗಿರಿಧರ್ ನಾಯ್ಕೆ ಒಂದು ವಾರದಲ್ಲಿ ಕಾಲನಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಅಹೋರಾತ್ರಿ ಪಂಚಾಯತ್‌ನ ಬಳಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮಸ್ಥರೊಳಗೆ ಹೊಕೈ
ಗ್ರಾಮಸಭೆಯಲ್ಲಿ ಹೊರಗಿನ ಗ್ರಾಮದವರಿಗೆ ಮಾತನಾಡಲು ಅವಕಾಶ ಕೊಡಬಾರದು ಎಂಬ ವಿಚಾರದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಸಂಧರ್ದಲ್ಲಿ ಗ್ರಾಮಸ್ಥರರಾದ ಇಕ್ಬಾಲ್ ಹುಸೇನ್ ಹಾಗೂ ಮೋಹನ ಎಂಬವರ ಮಧ್ಯೆ ಹೊಡೆದಾಟ ನಡೆದಿದೆ. ಈ ಸಂದಭರ್ದಲ್ಲಿ ಎರಡು ತಂಡಗಳೊಳಗೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಎರಡು ತಂಡಗಳೊಳಗೆ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆಯಿತು. ತನಗೆ ಹಲ್ಲೆ ನಡೆಸಲು ಮುಂದಾದವರು ಕ್ಷಮೆ ಕೇಳುವಂತೆ ಇಕ್ಬಾಲ್ ಹುಸೇನ್ ಪಟ್ಟು ಹಿಡಿದರು. ಕೊನೆಯಲ್ಲಿ ಉಪಾಧ್ಯಕ್ಷ ಲೋಕೇಶ್ ಅವರಿಬ್ಬರನ್ನು ರಾಜಿ ಸಂದಾನ ಮಾಡುವಲ್ಲಿ ಯಶಸ್ವಿಯಾದರು. ಬಳಿಕ ಸಭೆಯನ್ನು ಮುಂದುವರಿಸಲಾಯಿತು.
ಗೊಂದಲದ ಗೂಡಾದ ಗ್ರಾಮಸಭೆ
ಸಭೆಯಲ್ಲಿ ವರದಿಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾರಂಭದಿಂದಲೂ ತೀವ್ರ ಚರ್ಚೆ ಹಾಗೂ ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪಗಳೇ ನಡೆಯಿತು. ಬಳಿಕ ಅನ್ಯ ಗ್ರಾಮದವರು ಗ್ರಾಮ ಸಭೆಯಲ್ಲಿ ಮಾತನಾಡಲು ಅವಕಾಶ ಕೊಡಬಾರದು ಹಾಗೂ ಅವರು ಸಬೆಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ ಎಂದು ಆರೋಪಿಸಿ ಸದಸ್ಯರು, ಚರ್ಚಾನಿಯಂತ್ರಣಾಧಿಕಾರಿ ಹಾಗೂ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಪಿಡಿಒ ಮಧ್ಯೆ ತೀವ್ರ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಪಿಡಿಒ ಅಜಿತ್, ಅಧ್ಯಕ್ಷೆ ಸವಿತಾ ಹಾಗೂ ಉಪಾಧ್ಯಕ್ಷ ಲೋಕೇಶ್ ಮತ್ತು ಚರ್ಚಾನಿಯಂತ್ರಣಾಧಿಕಾರಿ ಗಣಪತಿ ಭಟ್ ಸಭೆಯನ್ನು ನಿಯಂತ್ರಿಸಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಒಟ್ಟಿನಲ್ಲಿ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಆರೋಗ್ಯ ಪೂರ್ಣ ಚರ್ಚೆಗಳು ನಡೆಯುವುದರ ಬದಲು ಆರೋಪ ಪ್ರತ್ಯಾರೋಪಗಳ ಮಧ್ಯೆ ಗ್ರಾಮ ಸಭೆಯು ಗೊಂದಲದ ಗೂಡಾಗಿ ಪರಿಣಮಿಸಿತು.
ಸಭೆಯಲ್ಲಿ ಉಪಸ್ಥಿತರಿದ್ದ ಇಲಾಖಾಧಿಕಾರಿಗಳು ಹಾಗೂ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಮೂಕಪ್ರೇಕ್ಷಕರಾಗಿದ್ದರು.
ಪೊಲೀಸರ ಆಗಮನ
ಕೆಲ ಸಮಯದ ಬಳಿಕ ಸ್ಥಳಕ್ಕಾಗಮಿಸಿದ ಸಂಪ್ಯ ಠಾಣಾ ಎಸ್ಸೈ ಸುರೇಶ್ ನಾಕ್ ಹಾಗೂ ಚೆಲುವಯ್ಯ ಹಾಗೂ ಸಿಬ್ಬಂದಿ ಸಭಾಂಗಣದ ಹೊರಗಿದ್ದ ಜನರನ್ನು ಚದುರಿಸಿ ವಾತಾವರಣವನ್ನು ತಿಳಿಗೊಳಿಸಿದರು. ಬಳಿಕ ಸಭೆಯು ಸಾಂಗವಾಗಿ ನಡೆಯಿತು.
ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ ಸದಸ್ಯ ರಾಮ ಪಾಂಬಾರು, ಸದಸ್ಯರಾದ ಸದಾನಂದ ಮಣಿಯಾಣಿ, ಸಾವಿತ್ರಿ ಎಂ.ಬಿ, ಅಮೃತ, ರಾಜೇಶ್, ಸುಂದರ, ಪ್ರೇಮಲತಾ, ಪ್ರೇಮಾವತಿ, ನಿರ್ಮಲ ಎಸ್, ಹೊನ್ನಪ್ಪ ಪೂಜಾರಿ, ಲೋಹಿತ್ ಪೂಜರಿ, ಸೀತಾರಾಮ ಮೇಲ್ಪಾದೆ, ಎ. ದಿವ್ಯನಾಥ ಶೆಟ್ಟಿ, ರವೀಂದ್ರ ಪೂಜಾರಿ, ಮಹಾಲಿಂಗ ನಾಯ್ಕ, ನವೀನ ಬಿ.ಡಿ, ಸರೋಜಿನಿ, ಸಲ್ಮಾ ಹಾಗೂ ಸಹನಾ ನಳಿನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಡಿಒ ಅಜಿತ್ ಸ್ವಾಗತಿಸಿದರು. ಕಾರ್ಯದರ್ಶಿ ಕೃಷ್ಣರಾಜ ವರದಿ ವಾಚಿಸಿದರು. ಸದಸ್ಯ ತಿಲಕ್ ರೈ ವಂದಿಸಿದರು.







