ಎಂಎಚ್370 ವಿಮಾನದ ಇನ್ನೂ 2 ಅವಶೇಷಗಳು ಪತ್ತೆ?
ಬಹುತೇಕ ಖಚಿತ: ಮಲೇಶ್ಯ ಸಚಿವ

ಕೌಲಾಲಂಪುರ, ಮೇ 12: ದಕ್ಷಿಣ ಆಫ್ರಿಕ ಮತ್ತು ಮಾರಿಶಸ್ ಸಮೀಪದ ರೋಡ್ರಿಗಸ್ ದ್ವೀಪದಲ್ಲಿ ಪತ್ತೆಯಾಗಿರುವ ಇನ್ನೂ ಎರಡು ಅವಶೇಷಗಳು ಎಂಎಚ್370 ವಿಮಾನದ್ದೆಂಬುದು ‘‘ಬಹುತೇಕ ಖಚಿತ’’ವಾಗಿದೆ ಎಂದು ಮಲೇಶ್ಯ ಸರಕಾರ ಇಂದು ಹೇಳಿದೆ. ಇದರೊಂದಿಗೆ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯನ್ ಏರ್‌ಲೈನ್ಸ್‌ನ ಎಂಎಚ್370 ವಿಮಾನದ್ದೆಂದು ನಂಬಲಾಗಿರುವ ಪತ್ತೆಯಾಗಿರುವ ಅವಶೇಷಗಳ ಸಂಖ್ಯೆ ಐದಕ್ಕೇರಿದೆ.
2014 ಮಾರ್ಚ್ 8ರಂದು ರಾತ್ರಿ 239 ಪ್ರಯಾಣಿಕರನ್ನು ಹೊತ್ತು ಕೌಲಾಲಂಪುರದಿಂದ ಬೀಜಿಂಗ್‌ಗೆ ಹಾರಾಟ ನಡೆಸುತ್ತಿದ್ದ ಎಂಎಚ್370 ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು. ಬಳಿಕ ಹಿಂದೂ ಮಹಾ ಸಾಗರದ ತಳದಲ್ಲಿ ವಿಮಾನಕ್ಕಾಗಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಲಾಗಿದೆಯಾದರೂ ಈವರೆಗೆ ಯಾವುದೇ ಫಲಿತಾಂಶ ಸಿಕ್ಕಿಲ್ಲ.

ಪತ್ತೆಯಾಗಿರುವ ಒಂದು ಅವಶೇಷ ಇಂಜಿನ್ ಕೌಲಿಂಗ್‌ನ ಭಾಗವಾಗಿದ್ದು ಆಂಶಿಕ ರಾಲ್ಸ್-ರಾಯ್ಸ್ ಲಾಂಛನವನ್ನು ಹೊಂದಿದೆ ಹಾಗೂ ಇನ್ನೊಂದು ಅವಶೇಷ ವಿಮಾನದ ಕ್ಯಾಬಿನ್‌ನ ಆಂತರಿಕ ಭಾಗದ ತುಂಡಾಗಿದೆ. ನಾಪತ್ತೆಯಾದ ವಿಮಾನದ ಆಂತರಿಕ ಭಾಗವೊಂದು ಪತ್ತೆಯಾಗಿರುವುದು ಇದೇ ಮೊದಲು. ಈ ವಿಷಯವನ್ನು ಮಲೇಶ್ಯದ ಸಾರಿಗೆ ಸಚಿವ ಲಿಯೋವ್ ಟಿಯಾಂಗ್ ಲೈ ತಿಳಿಸಿದರು. ಪತ್ತೆಯಾಗಿರುವ ಎರಡೂ ತುಂಡುಗಳು ಮಲೇಶ್ಯನ್ ಏರ್‌ಲೈನ್ಸ್‌ನ ಬೋಯಿಂಗ್ 777 ವಿಮಾನಗಳಲ್ಲಿ ಕಂಡುಬರುವ ಆಂತರಿಕ ವಿನ್ಯಾಸಕ್ಕೆ ಹೋಲುತ್ತವೆ ಎಂದು ಅವುಗಳ ತಪಾಸಣೆ ನಡೆಸಿದ ಆಸ್ಟ್ರೇಲಿಯದಲ್ಲಿರುವ ಅಂತಾರಾಷ್ಟ್ರೀಯ ಪರಿಣತರ ತಂಡವೊಂದು ಅಭಿಪ್ರಾಯಪಟ್ಟಿದೆ.

‘‘ಹಾಗಾಗಿ, ದಕ್ಷಿಣ ಆಫ್ರಿಕ ಮತ್ತು ರೋಡ್ರಿಗಸ್ ದ್ವೀಪದಲ್ಲಿ ಕಂಡುಬಂದಿರುವ ಎರಡೂ ಅವಶೇಷಗಳು ಬಹುತೇಕ ಎಂಎಚ್370 ವಿಮಾನದ್ದಾಗಿದೆ ಎಂಬುದಾಗಿ ತಂಡ ಖಚಿತಪಡಿಸಿದೆ’’ ಎಂದು ಸಚಿವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.







