ಮುಸ್ಲಿಂ ನಿಷೇಧ ತಾತ್ಕಾಲಿಕ, ಸಲಹೆ ಮಾತ್ರ: ಟ್ರಂಪ್ ತಿಪ್ಪರಲಾಗ

ವಾಶಿಂಗ್ಟನ್, ಮೇ 12: ತಾನು ಅಮೆರಿಕದ ಅಧ್ಯಕ್ಷನಾದರೆ ಮುಸ್ಲಿಮರ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರುವೆ ಎಂದು ಹೇಳುವ ಮೂಲಕ ವಿವಾದವೊಂದನ್ನು ಹುಟ್ಟುಹಾಕಿದ್ದ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತನ್ನ ನಿಲುವನ್ನು ಕೊಂಚ ಮೆತ್ತಗಾಗಿಸಿದ್ದಾರೆ. ತನ್ನ ಹೇಳಿಕೆ ‘‘ಸಲಹೆ ಮಾತ್ರ’’ ಆಗಿತ್ತು ಎಂದಿದ್ದಾರೆ.
‘‘ನಾವು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಅದೊಂದು ತಾತ್ಕಾಲಿಕ ನಿಷೇಧ. ಅದನ್ನು ಈವರೆಗೆ ಯಾರೂ ಜಾರಿಗೊಳಿಸಿಲ್ಲ. ಏನು ನಡೆಯುತ್ತಿದೆ ಎಂಬುದನ್ನು ನಾವು ಪತ್ತೆಹಚ್ಚುವವರೆಗೆ ಅದೊಂದು ಸಲಹೆ ಮಾತ್ರ’’ ಎಂದು ಟ್ರಂಪ್ ‘ಫಾಕ್ಸ್ ರೇಡಿಯೊ’ಗೆ ತಿಳಿಸದಿರು.
‘‘ಜಗತ್ತಿನಾದ್ಯಂತ ಭಯೋತ್ಪಾದನೆ ನಡೆಯುತ್ತಾ ಇದೆ. ಪ್ಯಾರಿಸ್‌ನಲ್ಲಿ ಭಯೋತ್ಪಾದನೆಯಿದೆ, ಸ್ಯಾನ್ ಬರ್ನಾಡಿನೊದಲ್ಲಿ ಇದೆ, ಜಗತ್ತಿನ ಎಲ್ಲ ಕಡೆಯೂ ಇದೆ. ಇದನ್ನು ಅವರು ನಿರಾಕರಿಸುವುದಾದರೆ ನಿರಾಕರಿಸಲಿ, ನಾನು ನಿರಾಕರಿಸುವುದಿಲ್ಲ’’ ಎಂದು ಲಂಡನ್‌ನ ನೂತನ ಮೇಯರ್ ಸಾದಿಕ್ ಖಾನ್ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಖಾನ್‌ರ ನಿಲುವನ್ನು ತಾನು ಒಪ್ಪುವುದಿಲ್ಲವಾದರೂ, ತಾನು ಅಮೆರಿಕದ ಅಧ್ಯಕ್ಷನಾಗಿರುವ ಅವಧಿಯಲ್ಲಿ ಸಾದಿಕ್ ಖಾನ್‌ಗೆ ಅಮೆರಿಕಕ್ಕೆ ಬರಲು ವಿನಾಯಿತಿ ನೀಡುತ್ತೇನೆ ಎಂದರು.
ಮೇಯರ್ ಆದ ಬಳಿಕ ಸಿಎನ್‌ಎನ್‌ಗೆ ಸಂದರ್ಶನವೊಂದನ್ನು ನೀಡಿದ್ದ ಸಾದಿಕ್ ಖಾನ್, ‘‘ಡೊನಾಲ್ಡ್ ಟ್ರಂಪ್ ಮತ್ತು ಅವರ ತಂಡಕ್ಕೆ ನನ್ನ ಸಂದೇಶವೇನೆಂದರೆ, ಇಸ್ಲಾಂ ಕುರಿತ ನಿಮ್ಮ ಅಭಿಪ್ರಾಯಗಳು ಅಜ್ಞಾನದಿಂದ ಕೂಡಿವೆ. ಮುಸ್ಲಿಮನಾಗಿದ್ದುಕೊಂಡು ಪಾಶ್ಚಿಮಾತ್ಯ ದೇಶವೊಂದರಲ್ಲಿ ಬದುಕಲು ಸಾಧ್ಯವಿದೆ, ಮುಸ್ಲಿಮನಾಗಿದ್ದುಕೊಂಡು ಅಮೆರಿಕವನ್ನು ಪ್ರೀತಿಸಲು ಸಾಧ್ಯವಿದೆ’’ ಎಂದು ಹೇಳಿದ್ದರು.
‘‘ಏನು ನಡೆಯುತ್ತಿದೆ ಎನ್ನುವುದನ್ನು ನಮ್ಮ ದೇಶದ ಪ್ರತಿನಿಧಿಗಳು ಇತ್ಯರ್ಥಪಡಿಸಿಕೊಳ್ಳುವವರೆಗೆ, ಮುಸ್ಲಿಮರ ಅಮೆರಿಕ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಬೇಕು’’ ಎಂಬುದಾಗಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಟ್ರಂಪ್ ಕರೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.







