ಹಗ್ಗಕ್ಕೆ ಕುರ್ಚಿ ಕಟ್ಟಿ ಬಾವಿಗಿಳಿಸಿ ಉಸಿರುಗಟ್ಟಿದ್ದ ಯುವಕನನ್ನು ರಕ್ಷಿಸಿದ ಸ್ನೇಹಿತರು
ಉಳ್ಳಾಲ, ಮೇ 12: ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಭಟ್ನಗರ ಎಂಬಲ್ಲಿ ಮನೆಯ ಬಾವಿಯ ಹೂಳನ್ನು ತೆಗೆಯಲು ಬಾವಿಗಿಳಿದ ಯುವಕನೋರ್ವ ಆಮ್ಲಜನಕವಿಲ್ಲದೆ ಉಸಿರಾಟದ ತೊಂದರೆಯಿಂದಾಗಿ ಸುಮಾರು 4 ನಿಮಿಷಗಳ ಕಾಲ ಒದ್ದಾಡುತ್ತಿದ್ದಾಗ ಸ್ಥಳೀಯ ಯುವಕರು ಸೇರಿ ಯುವಕನನ್ನು ಮೇಲೆತ್ತಿ ಪ್ರಾಣ ರಕ್ಷಿಸಿದ ಘಟನೆ ಗುರುವಾರ ನಡೆದಿದೆ.
ತೊಕ್ಕೊಟ್ಟು ಭಟ್ನಗರ ನಿವಾಸಿ ಪ್ರಕಾಶ್ ತನ್ನ ಅಂಗಳದಲ್ಲಿರುವ ಬಾವಿಯಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ ಬಾವಿಯಲ್ಲಿ ತುಂಬಿರುವ ಹೂಳನ್ನು ತೆಗೆಯಲು ಮೂವತ್ತೈದು ಅಡಿ ಆಳದ ಬಾವಿಗಿಳಿದು ಕೆಲಸ ಆರಂಭಿಸಿದ್ದರು. ಆದರೆ ಬಾವಿಯೊಳಗೆ ಆಮ್ಲಜನಕದ ಕೊರತೆ ಮತ್ತು ವಿಷಾನಿಲ ತುಂಬಿದ್ದರಿಂದ ಪ್ರಕಾಶ್ ಉಸಿರುಗಟ್ಟಿದ್ದು ಪ್ರಾಣ ರಕ್ಷಣೆಗಾಗಿ ಒದ್ದಾಡಿದ್ದಾರೆ.
ಭಟ್ನಗರದಲ್ಲಿ ಅದೇ ವೇಳೆ ಬುಧವಾರದಂದು ಆತ್ಮಹತ್ಯೆಗೈದಿದ್ದ ಲತೀಶ್ ಎಂಬ ಯುವಕನ ಶವ ದಫನಕ್ಕಾಗಿ ಸ್ಥಳೀಯ ಯುವಕರೆಲ್ಲರೂ ದೂರದ ನಂದಿಗುಡ್ಡೆ ಸ್ಮಶಾನಕ್ಕೆಂದು ಹೋಗಿದ್ದರು. ಪ್ರಕಾಶ್ ಬಾವಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ವಿಷಯ ತಿಳಿದಾಕ್ಷಣ ಸುಮಾರು ಹದಿನೈದರಷ್ಟು ಸ್ನೇಹಿತರು ಆಟೋ ರಿಕ್ಷಾದಲ್ಲಿ ಬಂದು ಇಬ್ಬರು ಬಾವಿಗಿಳಿದು ರಕ್ಷಣೆಗೆ ಯತ್ನಿಸಿದರೂ ಅವರಿಗೂ ಉಸಿರುಗಟ್ಟಿದ ಅನುಭವವಾಗಿ ರಕ್ಷಣೆ ಸಾಧ್ಯವಾಗಿರಲಿಲ್ಲ. ಕೂಡಲೇ ಸ್ಥಳೀಯರಾದ ಮೋಹನ್ ಬಂಗೇರ ತನ್ನ ಮನೆಯಿಂದ ಮರದ ಕುರ್ಚಿ ತಂದು ಹಗ್ಗಕ್ಕೆ ಕಟ್ಟಿ ಇಳಿಸಿ ಮತ್ತೋರ್ವ ಯುವಕ ಬಾವಿಗಿಳಿದು ಪ್ರಜ್ನೆ ತಪ್ಪಿದ್ದ ಪ್ರಕಾಶನನ್ನು ಕುರ್ಚಿಗೆ ಬಿಗಿಯಾಗಿ ಕಟ್ಟಿ ಸುರಕ್ಷಿತವಾಗಿ ಮೇಲೆತ್ತಿ ಸಾಹಸ ಮೆರೆದಿದ್ದಲ್ಲದೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು ಪ್ರಕಾಶ್ ಆರೋಗ್ಯವಂತರಾಗಿದ್ದಾರೆ.
ಯುವಕ ಬಾವಿಯೊಳಗೆ ಉಸಿರುಗಟ್ಟಿ ಪ್ರಾಣರಕ್ಷಣೆಗೆ ಗೋಗರೆಯುತ್ತಿದ್ದಾಗ ಮನೆಮಂದಿ ಅಗ್ನಿಶಾಮಕದಳದವರಿಗೆ ದೂರವಾಣಿ ಮೂಲಕ ವಿಷಯ ತಿಳಸಿದ್ದರೂ ಅವರು ವಿಳಂಬವಾಗಿ ಬಂದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.
ಪ್ರಕಾಶ್‌ರ ಸ್ನೇಹಿತರು ಅಗ್ನಿಶಾಮಕದಳದವನ್ನು ಕಾಯದೆ ಸಮಯಪ್ರಜ್ಞೆ ಮೆರೆದು ಸ್ನೇಹಿತನ ಪ್ರಾಣ ಉಳಿಸಿದ್ದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಯಿತು.









