ಗೂಗಲ್ ಸ್ಪರ್ಧೆಯ ವಿಜೇತರಲ್ಲಿ ಬೆಂಗಳೂರು,ಮೈಸೂರಿನ ಪ್ರತಿಭೆಗಳು

ಹೊಸದಿಲ್ಲಿ,ಮೇ 12: ಗೂಗಲ್‌ನ ‘ಕೋಡ್ ಟು ಲರ್ನ್’ ಸ್ಪರ್ಧೆಯ ಫಲಿತಾಂಶವನ್ನು ಬುಧವಾರ ಘೋಷಿಸಲಾಗಿದ್ದು, ವಿಜೇತ ಒಂಬತ್ತು ಶಾಲಾಮಕ್ಕಳಲ್ಲಿ ಬೆಂಗಳೂರಿನ ಆಡಿ ಕುಚ್ಲೌಸ್ ಮತ್ತು ಮೈಸೂರಿನ ನೀರವ ಅಯ್ಯಪ್ಪ ಅವರು ಸೇರಿದ್ದಾರೆ. ಇವರಿಬ್ಬರೂ ಐದನೆಯ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಆವಿಷ್ಕಾರ ಅಭಿಯಾನದಡಿ ಗೂಗಲ್ ಏರ್ಪಡಿಸಿದ್ದ ಕಂಪ್ಯೂಟರ್ ಪ್ರೋಗ್ರಾಮ್ ಸ್ಪರ್ಧೆಯಲ್ಲಿ ಬೆಂಗಳೂರಿನ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಏಳನೇ ತರಗತಿಯ ವಿದ್ಯಾರ್ಥಿ ಅರ್ನವ್ ಸತೀಶ ಸಿಂಧೂರ ಕೂಡ ವಿಜಯಮಾಲೆ ಧರಿಸಿದ್ದಾನೆ. ಎಲ್ಲ ಒಂಬತ್ತೂ ವಿಜೇತರನ್ನು ಇಲ್ಲಿ ಸನ್ಮಾನಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಅವರು ಗೂಗಲ್‌ನ ‘ಕೋಡ್ ಟು ಲರ್ನ್-2016’ ಸ್ಪರ್ಧೆಯ ಮುಂದಿನ ಆವೃತ್ತಿಗೆ ಚಾಲನೆ ನೀಡಿದರು.
ದೇಶಾದ್ಯಂತ ನೂರಾರು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಶ್ವದ 50ಕ್ಕೂ ಅಧಿಕ ರಾಷ್ಟ್ರಗಳ ಸ್ಪರ್ಧಿಗಳಿದ್ದರು ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಚೆನ್ನೈನ ಶ್ರೀಕೃಷ್ಣ ಮಧುಸೂದನನ್,ಶ್ಯಾಮ್ ಮತ್ತು ಅರ್ಜುನ ಎಸ್,ದಿಲ್ಲಿಯ ದೇವ್ ಪಾರಿಖ್,ಅಲೀಗಡದ ಬಿತ್ತಲ್ ಮಹೇಶ್ವರಿ,ಗುಡ್ಗಾಂವ್‌ನ ಅನನ್ಯಾ ಸಚದೇವ್ ಇತರ ವಿಜೇತ ವಿದ್ಯಾರ್ಥಿಗಳಾಗಿದ್ದಾರೆ.
ಸ್ಪರ್ಧೆಯ ನೂತನ ಆವೃತ್ತಿಗೆ ಚಾಲನೆ ದೊರಕಿರುವ ಹಿನ್ನೆಲೆಯಲ್ಲಿ 5ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳ ಹೆಸರುಗಳನ್ನು ಅವರ ಪರವಾಗಿ ಈ ಸ್ಪರ್ಧೆಗಾಗಿಯೇ ರೂಪಿಸಲಾಗಿರುವ ವೆಬ್‌ಸೈಟ್‌ನಲ್ಲಿ ನೋಂದಾಯಿಸಬಹುದಾಗಿದೆ.
ವಿದ್ಯಾರ್ಥಿಗಳು ಸ್ಕ್ರಾಚ್ ಅಥವಾ ಆ್ಯಪ್ ಇನವೆಂಟರ್‌ನಲ್ಲಿ ತಮ್ಮ ಯೋಜನೆಗಳನ್ನು ರೂಪಿಸಿ 2016 ಜೂನ್ 20ರಿಂದ ಜುಲೈ 31ರೊಳಗೆ ಅವುಗಳನ್ನು ಸಲ್ಲಿಸಬಹುದಾಗಿದೆ ಎಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.





