ಟ್ಯಾಂಕರ್ ಮೂಲಕ ಕಲುಷಿತ ನೀರು ಪೂರೈಕೆಯಿಂದ ಸಾಂಕ್ರಾಮಿಕ ರೋಗ ಭೀತಿ: ಕೃಷ್ಣ ಜೆ.ಪಾಲೆಮಾರ್

ಮಂಗಳೂರು, ಮೇ 10: ಮಂಗಳೂರು ಜನತೆಗೆ ನೀರು ನೀಡಲು ವಿಫಲವಾಗಿರುವ ಕಾಂಗ್ರೆಸ್ ಆಡಳಿತ ಇದೀಗ ಕಲುಷಿತ ನೀರನ್ನು ಟ್ಯಾಂಕರ್ ಮೂಲಕ ವಿತರಿಸುತ್ತಿದ್ದು ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಬರುವ ದಿನ ದೂರವಿಲ್ಲ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಆರೋಪಿಸಿದ್ದಾರೆ.
ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಕೊರತೆಯ ಹಿನ್ನೆಲೆಯಲ್ಲಿ ನಗರದ ಜನತೆಗೆ ನೀರಿನ ಗುಣಮಟ್ಟವನ್ನು ಪರೀಕ್ಷಿಸದೆ ಎಲ್ಲೆಡೆಯಿಂದ ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗುತ್ತಿದೆ. ನೀರಿನ ಗುಣಮಟ್ಟವನ್ನು ಪರೀಕ್ಷಿಸದೆ ಕೆಟ್ಟ ನೀರನ್ನು ಜನರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ನೀರು ಸರಬರಾಜು ಮಾಡುವ ಕಾಂಗ್ರೆಸ್ ಆಡಳಿತ ಟ್ಯಾಂಕರ್ ಗಳಲ್ಲಿ ಬ್ಯಾನರ್ ಹಾಕಿ ಪ್ರಚಾರ ಮಾಡುವುದರಲ್ಲಿ ಮಗ್ನವಾಗಿದೆ. ತುಂಬೆಯಲ್ಲಿ ಹೊಸ ಡ್ಯಾಂ ನಿರ್ಮಾಣ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಕುಂಠಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತು ಮಂಗಳೂರು ನಗರದ ಜನತೆಗೆ ಒಳ್ಳೆಯ ಕುಡಿಯುವ ನೀರು ಒದಗಿಸಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ನವೆಂಬರ್ ಡಿಸೆಂಬರ್‌ನಲ್ಲಿ ತುಂಬೆಯಲ್ಲಿ ಗೇಟ್ ಹಾಕದಿರುವುದೇ ನೀರಿನ ಸಮಸ್ಯೆ ತಲೆದೋರಲು ಕಾರಣ. ಈ ರೀತಿ ನಿರ್ಲಕ್ಷ ವಹಿಸಿದವರೇ ಇದೀಗ ನೀರಿನ ವ್ಯಾಪಾರ ಮಾಡುತ್ತಾ ಪ್ರಚಾರದಲ್ಲಿ ನಿರತವಾಗಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಂಕರ್ ಭಟ್, ಬಿಜೆಪಿ ಮುಖಂಡರಾದ ಕಿಶೋರ್ ರೈ, ಸಂಜೀವ ಪ್ರಭು, ರೂಪಾ ಡಿ. ಬಂಗೇರ ಉಪಸ್ಥಿತರಿದ್ದರು.







