ಜಗತ್ತಿನ ನಗರಗಳ 80 ಶೇ. ನಿವಾಸಿಗಳಿಂದ ಕೆಟ್ಟ ಗಾಳಿ ಸೇವನೆ: ವಿಶ್ವ ಆರೋಗ್ಯ ಸಂಸ್ಥೆ ವರದಿ

ಜಿನೇವ, ಮೇ 12: ಜಗತ್ತಿನ 80 ಶೇಕಡಕ್ಕೂ ಅಧಿಕ ನಗರವಾಸಿಗಳು ಕಳಪೆ ಗುಣಮಟ್ಟದ ಗಾಳಿಯನ್ನು ಉಸಿರಾಡುತ್ತಿದ್ದಾರೆ ಹಾಗೂ ಇದು ಅವರು ಶ್ವಾಸಕೋಶ ಮತ್ತು ಇತರ ಅಪಾಯಕಾರಿ ಕಾಯಿಲೆಗಳಿಗೆ ಗುರಿಯಾಗುವ ಅಪಾಯವನ್ನು ವೃದ್ಧಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನೂತನ ವರದಿಯೊಂದು ಗುರುವಾರ ಎಚ್ಚರಿಸಿದೆ.
ಬಡ ದೇಶಗಳ ನಗರ ವಾಸಿಗಳು ಈ ಅಪಾಯಕ್ಕೆ ಹೆಚ್ಚಾಗಿ ಗುರಿಯಾಗಿದ್ದಾರೆ ಎಂದು ಎಂದು ಹೇಳಿರುವ ಸಂಸ್ಥೆ, ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳ ಬಹುತೇಕ ಎಲ್ಲ ನಗರಗಳ (98 ಶೇ.) ಗಾಳಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳನ್ನು ತಲುಪಲು ವಿಫಲವಾಗಿದೆ ಎಂದಿದೆ.
ಶ್ರೀಮಂತ ದೇಶಗಳಲ್ಲಿ ವಾಯು ಮಾಲಿನ್ಯಕ್ಕೆ ತುತ್ತಾಗಿರುವ ನಗರಗಳ ಸಂಖ್ಯೆ 56 ಶೇಕಡ.
‘‘ನಗರ ವಾಯು ಮಾಲಿನ್ಯ ಕಳವಳಕರ ದರದಲ್ಲಿ ಏರುತ್ತಿದ್ದು, ಮಾನವ ಆರೋಗ್ಯ ಮೇಲೆ ದಾಳಿ ಮಾಡುತ್ತಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಇಲಾಖೆಯ ಮುಖ್ಯಸ್ಥೆ ಮರಿಯಾ ನೀರಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಭೂಮಿಯ ನಗರಗಳಲ್ಲಿನ ವಾಯು ಗುಣಮಟ್ಟ ಕುಸಿಯುತ್ತಿರುವುದನ್ನು ಸಂಸ್ಥೆಯ ಇತ್ತೀಚಿನ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಮಾಹಿತಿ ಕೋಶ ಬಹಿರಂಗಪಡಿಸಿದೆ. ಇದು ಮಾನವರದಲ್ಲಿ ಪಾರ್ಶ್ವವಾಯು ಮತ್ತು ಅಸ್ತಮ ಮುಂತಾದ ರೋಗಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.
2008 ಮತ್ತು 2013ರ ನಡುವಿನ ಅವಧಿಯಲ್ಲಿ 67 ದೇಶಗಳ 795 ನಗರಗಳಿಂದ ಸಂಗ್ರಹಿಸಲಾದ ಅಂಕಿಅಂಶಗಳನ್ನು ವರದಿಯಲ್ಲಿ ತುಲನೆ ಮಾಡಲಾಗಿದೆ.





