ಮಂಜೇಶ್ವರ: ಮಳೆಯಿಂದಾಗಿ ವಿವಿಧೆಡೆ ಹಾನಿ

ಮಂಜೇಶ್ವರ, ಮೇ 12: ಮೇ 11ರಂದು ರಾತ್ರಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ವ್ಯಾಪಕ ನಷ್ಟ ಸಂಭವಿಸಿದೆ.
ಗಾಳಿ, ಮಳೆಯಿಂದ ಬೃಹತ್ ಮರಗಳು ಉರುಳಿ ಬಿದ್ದು ವಿದ್ಯುತ್ ಕಡಿತಗೊಂಡಿತು. ರಾತ್ರಿಯಿಡೀ ವಿದ್ಯುತ್ ಇಲ್ಲದೆ ಜನರು ಸಂಕಷ್ಟ ಅನುಭವಿಸಿದರು. ಸಿಡಿಲಿನ ಆಘಾತದಿಂದ ಕುಂಬಳೆ ಸಿ.ಎಚ್.ಸಿ. ರಸ್ತೆ ಬಳಿಯ ಅಶೋಕ್ ಜೋಷಿ ಎಂಬವರ ಮನೆಗೆ ಹಾನಿಯಾಗಿದೆ. ಮನೆಯೊಳಗಿದ್ದ ಜೋಷಿಯವರ ಪತ್ನಿ ಅನ್ನಪೂರ್ಣರ ಕೈಯಲ್ಲಿದ್ದ ಮೊಬೈಲ್ ಸ್ಫೋಟಗೊಂಡಿತು. ಹತ್ತಿರದಲ್ಲಿ ಕುಳಿತಿದ್ದ ಪುತ್ರಿ ಅಪೂರ್ವ ಹಾಗೂ ಶಾರದಾ ಅಪಾಯವಿಲ್ಲದೆ ಪಾರಾದರು. ಮನೆಯಲ್ಲಿ ಟಿ.ವಿ, ಫ್ರಿಡ್ಜ್, ವಾಷಿಂಗ್ ಮೆಶಿನ್, ಮೋಟಾರ್ ಪಂಪ್ ಮತ್ತಿತರ ಉಪಕರಣಗಳಿಗೆ ಹಾನಿಯಾಗಿವೆ.
ಅಡ್ಕತ್ತಬೈಲ್ ಹರಿಜಾಲ್ ರಸ್ತೆಯ ಫಿರೋಜ್‌ರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಸಮೀಪದ ಪುರುಷೋತ್ತಮ ಎಂಬವರ ಮನೆಗೂ ತೆಂಗಿನ ಮರ ಬಿದ್ದು ನಷ್ಟ ಸಂಭವಿಸಿದೆ. ಕೂಡ್ಲುವಿನ ಸೂರ್ಲಿನಲ್ಲಿ ಮನೆಯೊಂದು ಹಾನಿಗೀಡಾಗಿದೆ.
ಅಶೋಕ್ ನಗರ, ವಿದ್ಯಾನಗರ ಮೊದಲಾದೆಡೆಗಳಲ್ಲಿ ಮರಗಳು ಉರುಳಿವೆ. ಕಾಸರಗೋಡು ವಿದ್ಯಾನಗರದಲ್ಲಿ ಹೈಟೆನ್ಶನ್ ವಿದ್ಯುತ್ ಲೈನ್‌ಗೆ ಮರ ಬಿದ್ದ ಪರಿಣಾಮ ಜಿಲ್ಲೆಯಾದ್ಯಂತ ವಿದ್ಯುತ್ ಸರಬರಾಜು ಮೊಟಕುಗೊಂಡಿತು. ಕಾಸರಗೋಡು ಅಶೋಕ್‌ನಗರ, ಸೂರ್ಲು, ನೆಲ್ಲಿಕುಂಜೆ ಕಡಪ್ಪುರ, ಕೂಡ್ಲು ಮೊದಲಾದೆಡೆ ಮರಗಳು ಉರುಳಿ ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾಯಿತು.







