ಮೇ 13ರಂದು ‘ವಾರೀಸು ಹಕ್ಕು’ ಅಭಿಯಾನದ ಸಮಾರೋಪ
ಮಂಗಳೂರು, ಮೇ 12: ಮುಸ್ಲಿಮ್ ಸಮುದಾಯದಲ್ಲಿ ವಾರೀಸು ಹಕ್ಕು, ವಸಿಯ್ಯತ್ ಮತ್ತು ವಕ್ಫ್ ಎಂಬ ಮೂರು ವಿಷಯಗಳಿಗೆ ಸಂಬಂಧಿಸಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯು ‘ಫರೀದತಮ್ಮಿನಲ್ಲಾಹ್’ ‘ಅಲ್ಲಾಹನು ನಿಶ್ಚಯಿಸಿರುವ ಪಾಲುಗಳು’ ಎಂಬ ಶೀರ್ಷಿಕೆಯಡಿ ನಗರದಾದ್ಯಂತ ಎಪ್ರಿಲ್ 10ರಿಂದ ಮೇ 9ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಿದೆ. ಇದರ ಸಮಾರೋಪ ಸಮಾರಂಭವು ಮೇ 13ರಂದು ಸಂಜೆ 5:30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾದ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಜಾಮಿಯ ತಯ್ಯಿಬಾ ಅರೇಬಿಕ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವೌಲಾನಾ ವಹೀದುದ್ದೀನ್ ಖಾನ್ ಉಮರಿ ಮದನಿ, ಕೇರಳದ ಪ್ರಭೋಧನಮ್ ವಾರ ಪತ್ರಿಕೆಯ ಸಂಪಾದಕ ಸದ್ರುದ್ದೀನ್ ವಾಝಕ್ಕಾಡ್ ಮತ್ತು ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನಾ ಯಹ್ಯಾ ತಂಙಳ್ ಮದನಿ ಭಾಗವಹಿಸಲಿದ್ದಾರೆ ಎಂದು ಜಮಾಅತೇ ಇಸ್ಲಾಮೀ ಹಿಂದ್‌ನ ಮಾಧ್ಯಮ ಕಾರ್ಯದರ್ಶಿ ಶಬೀರ್ ಅಹ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





