ಆಗಸ್ಟಾ ಹಗರಣದಲ್ಲಿ ಛತ್ತೀಸಗಢ ಬಿಜೆಪಿ ಸರಕಾರ !
ಪ್ರಶಾಂತ್ ಭೂಷಣ್ ಗಂಭೀರ ಆರೋಪ

ಹೊಸದಿಲ್ಲಿ,ಮೇ 12: ಛತ್ತೀಸಗಢ ಮುಖ್ಯಮಂತ್ರಿ ರಮಣ ಸಿಂಗ್ ಅವರ ಪುತ್ರ ಅಭಿಷೇಕ ಸಿಂಗ್ ಅವರು ಆಗಸ್ಟಾ ವೆಸ್ಟಲ್ಯಾಂಡ್‌ನ ಸರ್ವಿಸ್ ಏಜಂಟ್ ಆಗಿ ಕಾರ್ಯ ನಿರ್ವಹಿಸಿದ್ದರು ಮತ್ತು ಒಪ್ಪಂದ ಪೂರ್ಣಗೊಂಡ ಬಳಿಕ ಬ್ರಿಟಿಷ್ ವರ್ಜಿನ್ ಐಲಂಡ್(ಬಿವಿಐ)ನಲ್ಲಿಯ ತನ್ನ ಸಾಗರೋತ್ತರ ಸಂಸ್ಥೆಗಳ ಮೂಲಕ ಲಂಚವನ್ನು ಪಡೆದುಕೊಂಡಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಗುರುವಾರ ಗಂಭೀರ ಆರೋಪವನ್ನು ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು,ರಮಣ್ ಅವರಿಂದ ಆಗಸ್ಟಾ ಒಪ್ಪಂದಕ್ಕಾಗಿ ಅದರ ಏಜಂಟ್ ಬಿವಿಐನಲ್ಲಿಯ ಅಭಿಷೇಕ್ ಖಾತೆಯ ಮೂಲಕ ಶೇ.30ರಷ್ಟು ಕಮಿಷನ್ ಪಾವತಿಸಿದ್ದಾರೆ. ಯುಪಿಎದ ಆಗಸ್ಟಾ ಒಪ್ಪಂದ ಮೋಸದ್ದಾಗಿದೆ. ಅದಕ್ಕಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಆದರೆ ರಮಣ್ ಅವರ ಒಪ್ಪಂದ ಇನ್ನೂ ಮೋಸದ್ದಾಗಿದೆ. ಪ್ರಧಾನ ಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವರೇ? ನಿರ್ದಿಷ್ಟ ಕಂಪನಿ ಮತ್ತು ಮಾಡೆಲ್‌ನ ಹೆಲಿಕಾಪ್ಟರ್‌ನ್ನು ಟೆಂಡರ್‌ನಲ್ಲಿ ಉಲ್ಲೇಖಿಸಿದ್ದನ್ನು ಎಂದೂ ಕೇಳಿರಲಿಲ್ಲ. ಆದರೆ ರಮಣ ಸಿಂಗ್ ಸರಕಾರವು ಹೆಲಿಕಾಪ್ಟರ್ ಖರೀದಿಸುವಾಗ ಅದನ್ನು ಮಾಡಿದೆ ಎಂದು ಆರೋಪಿಸಿದ್ದಾರೆ.
ಭೂಷಣ್ ಹೇಳುವಂತೆ ಛತ್ತೀಸಗಡದ ಬಿಜೆಪಿ ಸರಕಾರವು 2007ರಲ್ಲಿ ಆಗಸ್ಟಾದಿಂದ ಹೆಲಿಕಾಪ್ಟರ್‌ನ್ನು ಖರೀದಿಸಿತ್ತು. 5.5 ಮಿ.ಡಾ.ಗಳಿಗೆ ಅದನ್ನು ಖರೀದಿಸಲು ನಿರ್ಧರಿಸಲಾಗಿತ್ತು. ಬಳಿಕ ಅದನ್ನು 6.1 ಮಿ.ಡಾ.ಗೆ ಹೆಚ್ಚಿಸಲಾಗಿತ್ತು. 2006ರಲ್ಲಿ ಇಂತಹುದೇ ಹೆಲಿಕಾಪ್ಟರ್‌ನ್ನು ಜಾರ್ಖಂಡ್ ಸರಕಾರವು 5.5 ಮಿ.ಡಾ.ಗೆ ಖರೀದಿಸಿತ್ತು.
ಈ ಖರೀದಿಯಲ್ಲಿ ಮುಖ್ಯಮಂತ್ರಿಯ ಪುತ್ರನಿಗೆ ಕಿಕ್‌ಬ್ಯಾಕ್ ಸಂದಾಯವಾಗಿದೆ ಎನ್ನುವುದು ಭೂಷಣ್ ಆರೋಪ. ಸರಣಿ ಟ್ವೀಟ್‌ಗಳ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೂಷಣ್, ತಾನು ಸೋರಿಕೆಯಾಗಿರುವ ಪನಾಮಾ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ, ಶಾರ್ಕ್ ಓಷನ್ಸ್ ಹೆಸರಿನ ಸಂಸ್ಥೆ ಬಿವಿಐನಲ್ಲಿರುವ ಅಭಿಷೇಕ ಸಿಂಗ್ ಅವರ ಕ್ವೆಸ್ಟಹೈಟ್ಸ್ ಲಿಮಿಟೆಡ್‌ಗೆ ಕಮಿಷನ್ ಪಾವತಿಸಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.





