ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಎ.ಕೆ.ಸುಬ್ಬಯ್ಯ ಒತ್ತಾಯ
ಮಡಿಕೇರಿ ಮೇ 12 : ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೊಡಗಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತಿಲ್ಲವೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಆರೋಪಿಸಿದ್ದು, ಸರಕಾರ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಸಚಿವ ದಿನೇಶ್ ಗುಂಡೂರಾವ್ ಅವರು ಕೊಡಗಿನ ದೊಡ್ಡ ಸಮಸ್ಯೆಯಾಗಿದ್ದಾರೆ. ಬಿಜೆಪಿ ಪ್ರಮುಖರೊಂದಿಗೆ ಕುಚುಕು ಗೆಳೆತನವನ್ನು ಹೊಂದಿರುವುದರಿಂದ ಬಿಜೆಪಿ ಕೂಡ ಸಚಿವರ ತಪ್ಪುಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲವೆಂದು ಆರೋಪಿಸಿದರು. ಭಾರತೀಯ ಜನತಾ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಕೊಡಗಿನ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ಸರಕಾರ ಮತ್ತು ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳನ್ನು ಮಾಡಬೇಕೆ ಹೊರತು ಕೇವಲ ಕುಂಟು ನೆಪಗಳನ್ನು ನೀಡುವುದು ಕೆಲಸವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಆದಿವಾಸಿಗಳ ಅತಂತ್ರ ಬದುಕು ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳು ಕೊಡಗನ್ನು ಕಾಡುತ್ತಿದ್ದರೂ ಇವುಗಳಿಗೆ ಶಾಶ್ವತ ಪರಿಹಾರವನ್ನು ಸೂಚಿಸದೆ ಕೇಲವ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಬೆಯಲ್ಲೇ ಸಚಿವರು ಕಾಲ ಕಳೆಯುತ್ತಿದ್ದಾರೆ. ಆದಿವಾಸಿಗಳಿಗೆ ನಿವೇಶನ ಹಕ್ಕನ್ನು ಒದಗಿಸಿಕೊಡುವ ಗಂಭೀರ ಸವಾಲಿದೆ ಎಂದರು.





