ಗಾಯಾಳು ಮೃತ್ಯು: ಮೂವರಿಗೆ ಗಾಯ
ಆ್ಯಂಬುಲೆನ್ಸ್ ಪಲ್ಟಿ
ಶಿವಮೊಗ್ಗ, ಮೇ 12: ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರೋಗಿಯೋರ್ವರನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ವಾಹನ ಪಲ್ಟಿಯಾಗಿ ಬಿದ್ದ ಪರಿಣಾಮ ರೋಗಿ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಕ್ರಾಸ್‌ನಲ್ಲಿ ನಡೆದಿದೆ. ನರಸಿಂಹಸ್ವಾಮಿ (68) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರೊಂದಿಗೆ ಆ್ಯಂಬುಲೆನ್ಸ್ ನಲ್ಲಿ ತೆರಳುತ್ತಿದ್ದ ಅವರ ಕುಟುಂಬ ಸದಸ್ಯರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆ: ನರಸಿಂಹಸ್ವಾಮಿಯವರು ಸೈಕಲ್‌ನಲ್ಲಿ ತೆರಳುವಾಗ ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯ ಮೇರೆಗೆ ಆ್ಯಂಬುಲೆನ್ಸ್‌ವೊಂದರಲ್ಲಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಚಾಲಕನು ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದ ಕಾರಣದಿಂದ ಆ್ಯಂಬುಲೆನ್ಸ್ ಪಲ್ಟಿಯಾಗಿ ಬಿದ್ದಿದೆ. ತಕ್ಷಣವೇ ಇವರನ್ನು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.





